ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ನಗರದಲ್ಲಿ ಸೀಲ್‍ಡೌನ್ ಶುರುವಾಗಲಿದೆ
ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಬೆಂಗಳೂರಿನ ಬಹುತೇಕ ಏರಿಯಾಗಳು ಸೀಲ್‍ಡೌನ್ ಆಗಲಿವೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಆಯ್ದ ಏರಿಯಾಗಳಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಇಂದು ಸಿಎಂ ಜೊತೆ ಈ ಬಗ್ಗೆ ಗಂಭೀರ ಚರ್ಚೆ ಮಾಡಲಾಗುತ್ತಿದೆ. ಒಂದು ವೇಳೆ ಹೀಗೆ ನಗರದಲ್ಲಿ ಸಡಲಿಕೆ ಮುಂದುವರಿಸಿದರೆ ಕೊರೊನಾ ನಿಯಂತ್ರಣ ಅಸಾಧ್ಯ ಎಂದಿದ್ದಾರೆ.
ನಗರದ ಸುಮಾರು 7 ಏರಿಯಾಗಳು ಕಂಪ್ಲೀಟ್ ಸೀಲ್‍ಡೌನ್ ಮಾಡುವ ಸಾಧ್ಯತೆ ಇದೆ. ಚಾಮರಾಜಪೇಟೆ, ಚಿಕ್ಕಪೇಟೆ, ಕಲಾಸಿಪಾಳ್ಯ ಹೀಗೆ ಬಹುತೇಕ ಏರಿಯಾಗಳು ಸೀಲ್‍ಡೌನ್ ಆಗಲಿವೆ. ಲಾಕ್‍ಡೌನ್ ಸಡಲಿಕೆ ವೇಳೆಯೂ ಸಿಎಂಗೆ ಈ ಬಗ್ಗೆ ಬಿಬಿಎಂಪಿ ವರದಿ ನೀಡಿತ್ತು. ಹೀಗಾಗಿ ನಗರದಲ್ಲಿ ಕೊರೊನಾ ಹೆಚ್ಚಾಗಲು ಸಡಲಿಕೆಯೇ ಕಾರಣ ಎನ್ನಲಾಗಿದೆ. ಜೊತೆಗೆ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮಾಡದಿರುವುದು ಕೂಡ ಕೊರೊನಾ ಸೋಂಕು ಹೆಚ್ಚಾಗಲು ಕಾರಣವಾಗಿದೆ. ಹೀಗಾಗಿ ಸಿಎಂ ಯಡಿಯೂರಪ್ಪ ಜೊತೆ ಸಭೆ ಮುಗಿಸಿದ ಬಳಿಕ ಬಹುತೇಕ ಇಂದೇ ಆಯ್ದ ಏರಿಯಾಗಳು ಸೀಲ್‍ಡೌನ್ ಆಗುವ ಸಾಧ್ಯತೆ ಇದೆ.
ಕೊರೊನಾ ನಿಯಂತ್ರಣಕ್ಕೆ ಇಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸಭೆ ಕರೆದಿದ್ದಾರೆ. ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಪಟ್ಟವರ ಜೊತೆ ಚರ್ಚಿಸಲು ಸಭೆ ಕರೆದಿದ್ದು, ಇಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ಮಾಡಲಾಗುತ್ತಿದೆ. ಸಭೆಯಲ್ಲಿ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಕೊರೊನಾ ನಿಯಂತ್ರಣ ಸಂಬಂಧ ಚರ್ಚೆ ನಡೆಸಲಿದ್ದಾರೆ. ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಶುಲ್ಕ ನಿಗದಿ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ.