ನವದೆಹಲಿ: ಪಿಎಂ ಕೇರ್ಸ್ ಫಂಡ್ ಗೆ ಬರುತ್ತಿರುವ ದೇಣಿಗೆ ಮೂಲ ಮತ್ತು ಅದನ್ನು ಯಾವ ಉದ್ದೇಶಗಳಿಗೆ ಬಳಕೆ ಮಾಡಲಾಗಿದೆ ಎಂಬ ವಿವರವನ್ನು ವೆಬ್‍ಸೈಟ್ ನಲ್ಲಿ ಪ್ರಕಟಿಸಲು ಸೂಚಿಸುವಂತೆ ಕೋರಿ ದೆಹಲಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಪಿಎಂ ಕೇರ್ಸ್ ಮಾಹಿತಿ ಕೋರಿ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಬಳಿಕ ಡಾ.ಎಸ್.ಎಸ್ ಹೂಡಾ ಅವರು ವಕೀಲ ಆದಿತ್ಯ ಹೂಡಾ ಮೂಲಕ ಈ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸಲ್ಲಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ಅಥಾವ ಸರ್ಕಾರಿ ನಿಯಂತ್ರಿತ ಎಲ್ಲ ಹಣಕಾಸು ಸಂಸ್ಥೆಗಳು ಮಾಹಿತಿ ಹಕ್ಕಿನಡಿ ಬರಲಿದೆ. ಪಿಎಂ ಕೇರ್ಸ್ ಟ್ರಸ್ಟ್ ಗೆ ಪ್ರಧಾನ ಮಂತ್ರಿಗಳು ಅಧ್ಯಕ್ಷರಾಗಿದ್ದು, ಹಣಕಾಸು ಸಚಿವರು, ರಕ್ಷಣಾ ಸಚಿವರು ಮತ್ತು ಗೃಹ ಸಚಿವರು ಟ್ರಸ್ಟಿಗಳಾಗಿದ್ದಾರೆ ಹೀಗಾಗಿ ಪಿಎಂ ಕೇರ್ಸ್ ಕೂಡಾ ಸರ್ಕಾರದ ಹಣಕಾಸು ಸಂಸ್ಥೆಯಾಗಲಿದೆ. ಅಲ್ಲದೆ ಪಿಎಂ ಕೇರ್ಸ್ ಗೆ ಸಾರ್ವಜನಿಕ ವಲಯದ ಉದ್ಯಮ ಕ್ಷೇತ್ರಗಳಿಂದ ದೊಡ್ಡ ಮೊತ್ತದ ಹಣ ಹರಿದು ಬಂದಿದೆ. ಸಾರ್ವಜನಿಕರು ಹಣ ನೀಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ಒಂದು ದಿನದ ಸಂಬಂಳವನ್ನು ನೀಡಿದ್ದಾರೆ. ಪಿಎಂ ಕೇರ್ಸ್ ಈಗ ಸಾರ್ವಜನಿಕ ಪ್ರಾಧಿಕಾರವಾಗಲಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಪಿಎಂ ಕೇರ್ಸ್ ಸಾರ್ವಜನಿಕ ಪ್ರಾಧಿಕಾರವಲ್ಲ ಎಂದಾದರೆ ಇದಕ್ಕೆ ಹಣ ನೀಡುವಂತೆ ಸರ್ಕಾರ ಜನರನ್ನು ಪ್ರೇರೆಪಿಸಬಹುದಾ ಎಂದು ಕೋರ್ಟ್ ಪರಿಶೀಲಿಸಬೇಕು. ಮಾಹಿತಿ ಹಕ್ಕು ಆರ್ಟಿಕಲ್ 19(1)(ಎ) ಸಾರ್ವಜನಿಕ ಪ್ರಾಧಿಕಾರವಲ್ಲದಿದ್ದರೂ ಜನರ ಹಣ ವ್ಯಯದ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ಇದನ್ನು ತಿಳಿದುಕೊಳ್ಳುವುದು ಜನರ ಮೂಲಭೂತ ಹಕ್ಕಾಗಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ
ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಈ ಸಂದರ್ಭದಲ್ಲಿ ಪಿಎಂ ಕೇರ್ಸ್ ಫಂಡ್ ಯಾವುದಕ್ಕೆ ಹೇಗೆ ಬಳಕೆಯಾಗುತ್ತಿದೆ ಎನ್ನುವ ಮಾಹಿತಿಯನ್ನು ನೀಡಬೇಕು. ಈ ಮಾಹಿತಿ ನೀಡದಿರುವುದು ಅನುಮಾನಕ್ಕೆ ಕಾರಣವಾಗಿದೆ. ಕೊರೊನಾಗಾಗಿ ನಿಧಿ ಸ್ಥಾಪಿಸಿರುವಾಗ ಮಾಹಿತಿ ನೀಡಲು ಹಿಂಜರಿಕೆ ಯಾಕೆ ಹಾಗೂ ಇದರ ದುರ್ಬಳಕೆಯಾಗಿಲ್ಲ ಎನ್ನುವುದಾದರೆ ಮಾಹಿತಿ ನೀಡಲು ನಿರಾಕರಿಸುವುದೇಕೆ ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಈ ಅರ್ಜಿ ಜೂನ್ 10ರ ಬಳಿಕ ವಿಚಾರಣೆಗೆ ಬರಲಿದೆ.