ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ.
ಪೊಲೀಸರ ತನಿಖೆಯಲ್ಲಿ ಮಧ್ಯ ಪ್ರವೇಶಿಸಿಸುವ ಯತ್ನ ಮಾಡುವ ಮೂಲಕ ಡಿಕೆಶಿ ಸೋನಿಯಾ ಗಾಂಧಿ ರಕ್ಷಣೆಗಾಗಿ ಪೊಲೀಸರ ಮೇಲೆ ಡಿಕೆಶಿ ಒತ್ತಡ ಹಾಕಿದ್ದಾರೆ ಎಂದು ವಕೀಲರಾದ ಯೋಗೇಂದ್ರ ಹೊಡಘಟ್ಟ ಹಾಗೂ ನರೇಂದ್ರ ಪಿ.ಆರ್ ಅವರು, ಸಿಎಂ, ಗೃಹ ಸಚಿವರು, ಡಿಜಿ/ಐಜಿಪಿ, ಬೆಂಗಳೂರು ಪೊಲೀಸ್ ಆಯುಕ್ತರು ಹಾಗೂ ಶಿವಮೊಗ್ಗ ಎಸ್ಪಿಗೆ ದೂರು ನೀಡಿದ್ದಾರೆ.
ಇನ್ನು ಸೋನಿಯಾ ಗಾಂಧಿ ವಿರುದ್ಧ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಪಿಎಂ ಫಂಡ್ ದುರ್ಬಳಕೆಯಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ಆರೋಪಿಸಿತ್ತು. ಈ ಸಂಬಂಧ ವಕೀಲ ಪ್ರವೀಣ್ ಕುಮಾರ್ ಎಂಬುವವರು ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದ್ದರು . ಈ ಪ್ರಕರಣದಲ್ಲಿ ಡಿಕೆಶಿ ಎಫ್ಐಆರ್ ದಾಖಲಿಸಿದ ಪೊಲೀಸ್ ಅಧಿಕಾರಿ ಅಮಾನತ್ತಿಗೆ ಒತ್ತಡ ಹಾಕಿದ್ದಾರೆ. ಜೊತೆಗೆ ಡಿಕೆಶಿ ತಮಗೆ ಇರುವ ರಾಜಕೀಯ ಪ್ರಭಾವ ಬಳಸಿ ಬಿ ರಿಪೋರ್ಟ್ ದಾಖಲಿಸುವಂತೆ ಒತ್ತಡ ಹಾಕಿದ್ದಾರೆ. ಡಿಕೆಶಿ ಮನವಿಯಂತೆ ಎಫ್ಐಆರ್ ವಾಪಸ್ ಪಡೆದರೆ ಪೊಲೀಸ್, ಕಾನೂನಿನ ಮೇಲಿನ ಗೌರವ ಹಾಳಾಗುತ್ತದೆ. ರಾಜಕೀಯ ಪ್ರಭಾವ ಬೀರುತ್ತಿರುವ ಡಿಕೆಶಿ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ವಕೀಲರು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಲು ಅನುವು ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.