ಕೊಳ್ಳೇಗಾಲ, ಮೇ 27- ಪವಿತ್ರ ರಂಜಾನ್ ಹಬ್ಬ ಮುಗಿದ ಬೆನ್ನಲ್ಲೇ ಮುಸಲ್ಮಾನ ಸಮುದಾಯದ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ನಾಲ್ಕು ಮಂದಿ ಭೀಕರವಾಗಿ ಹತ್ಯೆಗೀಡಾಗಿರುವ ಘಟನೆ ಗುಂಡ್ಲುಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣ ಪುರಸಭೆ ಸದಸ್ಯ ನೂರುಲ್ಲಾ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಜಾಕಿರ್‍ಹುಸೇನ್ ಗ್ರಾಮದ ನಿವಾಸಿಗಳಾದ ಜಕಾವುಲ್ಲಾ, ಇದ್ರೀಶ್, ಕೈಸರ್ ಹಾಗೂ ನಸ್ರುಲ್ಲಾ ಕೊಲೆಯಾದ ನತದೃಷ್ಟರು.
ನಿನ್ನೆ ರಾತ್ರಿ 10 ಗಂಟೆ ಸಮಯದಲ್ಲಿ ಅಸ್ಲಾಂ, ಜಮೀರ್ ಮತ್ತಿತರರ ಗುಂಪು ಮಾರಕಾಸ್ತ್ರಗಳನ್ನು ಹಿಡಿದು ಏಕಾಏಕಿ ನೂರುಲ್ಲಾ ಗುಂಪಿನ ಸದಸ್ಯರ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾದರು.
ಘಟನೆಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರೆ, ಮತ್ತೋರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಆತನನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೂರುಲ್ಲಾ ಗುಂಪಿನವರು ತನ್ನ ಎದುರಾಳಿ ಗುಂಪಿನೊಂದಿಗೆ ವೈಷಮ್ಯ ಕಟ್ಟಿಕೊಂಡಿದ್ದು, ಈ ಹಿಂದೆ ಹಲವಾರು ಬಾರಿ ಬಡಿದಾಡಿಕೊಂಡಿದ್ದರು. ಪದೇ ಪದೇ ಎರಡು ಗುಂಪಿನ ನಡುವೆ ಮಾರಾಮಾರಿ ನಡೆಯುತ್ತಿತ್ತು ಎನ್ನಲಾಗಿದೆ.
ಈ ಹಿಂದೆ ನಡೆದ ಘರ್ಷಣೆಯಲ್ಲೂ ಕೆಲವರು ತೀವ್ರವಾಗಿ ಗಾಯಗೊಂಡಿದ್ದರು. ಹೀಗಾಗಿ ಇದೇ ವಿಚಾರವಾಗಿ ಮಂಗಳವಾರ ರಾತ್ರಿ ಮಾರಾಮಾರಿ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಗುಂಡ್ಲುಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಲ್ವರನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ದುಷ್ಕರ್ಮಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.ನಾಲ್ವರ ಕೊಲೆಗೆ ಪ್ರತೀಕಾರವಾಗಿ ಪ್ರತಿದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಪೊಲೀಸರು ಉಭಯ ಗುಂಪುಗಳ ಸದಸ್ಯರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.