ಬೆಂಗಳೂರು,ಏ.17-ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳನ್ನು ತಡೆಗಟ್ಟಲು ಮುಂದಾಗಿರುವ ಬಿಬಿಎಂಪಿ ಅಕ್ಕಪಕ್ಕದ ಮನೆಗಳಿಗೆ ಹೊಸಬರು ಬಂದರೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ.
ಕೊರೊನಾ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ಕೆಲವು ವ್ಯಕ್ತಿಗಳು ಮನೆ ಖಾಲಿ ಮಾಡಿಕೊಂಡು ಬೇರೆ ವಾರ್ಡ್‍ಗಳಿಗೆ ತೆರಳುತ್ತಿರುವುದು ಸಾಬೀತಾದ ನಂತರ ಬಿಬಿಎಂಪಿ ಈ ಮಹತ್ವದ ತೀರ್ಮಾನ ಕೈಗೊಂಡಿದೆ. ಹೊಸಬರು ಮನೆ ಕೇಳಿಕೊಂಡು ಬಂದರೆ ಬಾಡಿಗೆ ನೀಡಬೇಡಿ.
ಒಂದು ವೇಳೆ ನಿಮ್ಮ ಅಕ್ಕಪಕ್ಕದ ಮನೆಗಳಿಗೆ ಹೊಸಬರು ಬಂದರೆ ಕೂಡಲೇ ಸ್ಥಳೀಯ ಕಾರ್ಪೊರೇಟರ್ ಗಳಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಟಿಪ್ಪುನಗರದಲ್ಲಿ ಕೊರೊನಾ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಮಹಾಮಾರಿ ಇಲ್ಲಿಂದ ವೈಟ್‍ಫೀಲ್ಡ್‍ಗೂ ಹರಡಿರುವ ಸಾಧ್ಯತೆಗಳು ದಟ್ಟವಾಗಿರುವುದರಿಂದ ಆ ಪ್ರದೇಶದಲ್ಲೂ ಆತಂಕ ಶುರುವಾಗಿದೆ.
ಟಿಪ್ಪುನಗರದಲ್ಲಿ ಕೊರೊನಾ ಸೋಂಕಿಗೆ ಬಲಿಯಾದ ವೃದ್ದನ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಆತನ ಮಗಳು ಹಾಗೂ ಮೊಮ್ಮಗನಿಗೂ ಕೊರೊನಾ ಸೋಂಕು ತಗುಲಿದ್ದು, ಅವರು ವೈಟ್‍ಫೀಲ್ಡ್‍ನಲ್ಲಿರುವ ತಮ್ಮ ಮನೆಗೆ ಟಿಪ್ಪುನಗರದಿಂದ ಹೋಗಿ ಬರುತ್ತಿದ್ದರು ಎನ್ನಲಾಗಿದೆ.
ಮಗಳ ಜೊತೆ ಅಳಿಯನು ಪ್ರಾಥಮಿಕ ಸಂಪರ್ಕದಲ್ಲಿದ್ದು, ಇಬ್ಬರು ವೈಟ್‍ಫೀಲ್ಡ್‍ನಲ್ಲಿ ನೆಲೆಸಿರುವುದರಿಂದ ಅಲ್ಲೂ ಕೊರೊನಾ ಸೊಂಕು ಹರಡಿರುವ ಸಾಧ್ಯತೆ ಇರುವುದರಿಂದ ಅವರಿಬ್ಬರ ಜೊತೆ ಸಂಪರ್ಕ ಹೊಂದಿದವರ ಪತ್ತೆ ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದೆ.
# ಕಾರ್ಪೊರೇಟರ್ ಹೋಟೆಲ್ ಕ್ವಾರಂಟೈನ್‍ಗೆ:
ಟಿಪ್ಪುನಗರದಲ್ಲಿ ಮೃತಪಟ್ಟ ಸೋಂಕಿತ ವೃದ್ದನ ಮನೆ ಸಮೀಪವೇ ಸ್ಥಳೀಯ ಕಾರ್ಪೊರೇಟರ್ ಮನೆಯಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಪೊರೇಟರ್ ಹಾಗೂ ಅವರ ಪತಿಯನ್ನು ಹೋಂ ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಇದೀಗ ಅವರನ್ನು ಹೋಟೆಲ್ ಕ್ವಾರಂಟೈನ್‍ಗೆ ಶಿಫ್ಟ್ ಮಾಡಲಾಗಿದೆ.
ಟಿಪ್ಪು ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ವೃದ್ದನ ಜೊತೆ ಸಂಪರ್ಕ ಹೊಂದಿದ್ದೆವು ಎಂಬ ಮಾಹಿತಿ ನೀಡಲು ನಿರಾಕರಿಸುತ್ತಿದ್ದ ಸ್ಥಳೀಯರು ಇದೀಗ ಖುದ್ದು ಬಿಬಿಎಂಪಿ ಅಧಿಕಾರಿಗಳ ಬಳಿ ಬಂದು ಕೊರೊನಾ ಸೋಂಕು ತಪಾಸಣೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.
# ಹಾಟ್‍ಸ್ಪಾಟ್ ಪಾದರಾಯನಪುರ:
ಸೀಲ್‍ಡೌನ್ ಒಳಗಾಗಿರುವ ಪಾದರಾಯನಪುರದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ. ಇದುವರೆಗೂ 10 ಕೊರೊನಾ ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿದ್ದು, ಒಂದೇ ಕಟ್ಟಡದಲ್ಲಿರುವ ಏಳು ಜನರಿಗೆ ಹಾಗೂ ಪಕ್ಕದ ಮನೆಯ ಇಬ್ಬರಿಗೆ, ಹಿಂದಿನ ಮನೆಯ ಒಬ್ಬರಿಗೆ ಮಹಾಮಾರಿ ಒಕ್ಕರಿಸಿದೆ.
ನಿಜಾಮುದ್ದೀನ್‍ಗೆ ಹೋಗಿ ಬಂದಿದ್ದ ಒಂದೇ ಕುಟುಂಬದ ಮೂವರಲ್ಲಿ ಕೊರೊನಾ ಪತ್ತೆಯಾಗಿತ್ತು. ಈ ಕುಟುಂಬದೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಏಳು ಜನರಿಗೂ ಕೊರೊನಾ ಸೋಂಕು ತಗುಲಿರುವುದರಿಂದ ಪಾದರಾಯನಪುರದಲ್ಲಿ ಮತ್ತಷ್ಟು ಪಾಸಿಟಿವ್ ಕೇಸ್‍ಗಳು ಪತ್ತೆಯಾಗುವ ಸಾಧ್ಯತೆ ಇರುವುದರಿಂದ ಈ ವಾರ್ಡ್ ಕೊರೊನಾ ಹಾಟ್‍ಸ್ಪಾಟಾಗಿ ಪರಿವರ್ತನೆಗೊಂಡಿದೆ.
ಪಾದರಾಯನಪುರ ವಾರ್ಡ್‍ನ ಸೀಲ್‍ಡೌನ್ ಮಾಡಿದ್ದರೂ ಜನ ಬ್ಯಾರಿಕೇಡ್ ಹಾಗೂ ತಡೆಗೋಡೆಗಳನ್ನು ಸರಿಸಿ ಉದಾಸೀನದಿಂದ ಓಡಾಡುತ್ತಿರುವುದರಿಂದ ಇಲ್ಲಿ ಮತ್ತಷ್ಟು ಕೊರೊನಾ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆಗಳಿವೆ.