ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆ ನಡೆಸಬಾರದು.
ಇಷ್ಟವೋ ಕಷ್ಟವೋ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವನ್ನು ಪ್ರತಿಯೊಬ್ಬರೂ ಪಾಲನೆ ಮಾಡಲೇಬೇಕು.
ಲಕ್ಷ್ಮಣ ಸವದಿಯನ್ನು ಸಂಪುಟಕ್ಕೆ ತೆಗೆದುಕೊಂಡಿದ್ದರ ಹಿಂದೆ ಸಾಕಷ್ಟು ರಾಜಕೀಯ ಲೆಕ್ಕಾಚಾರಗಳಿವೆ
ಬೆಂಗಳೂರು, ಫೆ.4- ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆ ನಡೆಸಬಾರದು. ವರಿಷ್ಠರು ತೆಗೆದುಕೊಂಡ ತೀರ್ಮಾನವನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು. ಯಾರೊಬ್ಬರೂ ಪ್ರತ್ಯೇಕ ಸಭೆ ನಡೆಸಬಾರದೆಂದು ಬಿಜೆಪಿ ದೆಹಲಿ ವರಿಷ್ಠರು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಸಚಿವ ಸ್ಥಾನ ಆಕಾಂಕ್ಷಿಗಳು ನಿನ್ನೆ ಶಾಸಕರ ಭವನದಲ್ಲಿ ಸಭೆ ನಡೆಸಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ನಾಯಕರು ಮುಂದೆ ಇದಕ್ಕೆ ಅವಕಾಶ ನೀಡದಂತೆ ಎಚ್ಚರ ವಹಿಸಬೇಕೆಂದು ರಾಜ್ಯ ಘಟಕದ ನಾಯಕರಿಗೂ ಸಂದೇಶ ರವಾನಿಸಿದ್ದಾರೆ.
ಇಷ್ಟವೋ ಕಷ್ಟವೋ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವನ್ನು ಪ್ರತಿಯೊಬ್ಬರೂ ಪಾಲನೆ ಮಾಡಲೇಬೇಕು. ನಾವು ತೆಗೆದುಕೊಳ್ಳುವ ತೀರ್ಮಾನಗಳು ಪಕ್ಷದ ಹಿತದೃಷ್ಟಿಯಿಂದ ಒಳಿತಾಗಿರುತ್ತದೆ ಎಂಬುದನ್ನು ಎಲ್ಲರೂ ಮನಗಾಣಬೇಕೆಂದು ಹೇಳಿದ್ದಾರೆ. ಸಮಾನ ಮನಸ್ಕರ ಸಭೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪ್ರಸ್ತುತ ದೆಹಲಿಯಲ್ಲಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಜತೆ ಮಾತುಕತೆ ನಡೆಸಿ ಇಂತಹ ಬೆಳವಣಿಗೆಯನ್ನು ನಾವು ಸಹಿಸುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ಆಡಳಿತವಿರುವ ಕೇಂದ್ರ ಇಲ್ಲವೆ ಇತರೆ ರಾಜ್ಯಗಳಲ್ಲಿ ಎಲ್ಲಿಯೂ ಅಸಮಾಧಾನ, ಭಿನ್ನಮತ ಕಂಡುಬಂದಿಲ್ಲ. ಕರ್ನಾಟಕದಲ್ಲಿ ಮಾತ್ರ ಇಂತಹ ಬೆಳವಣಿಗೆಗಳು ನಡೆಯುತ್ತಲೇ ಇರುತ್ತವೆ. ಪ್ರಾರಂಭದಲ್ಲೇ ಇದನ್ನು ಚಿವುಟಿಹಾಕಬೇಕೆಂದು ನಡ್ಡಾ ಕಟೀಲ್‍ಗೆ ಸೂಚಿಸಿದ್ದಾರೆ. ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು, ಯಾವಾಗ ವಿಸ್ತರಣೆ ಮಾಡಬೇಕೆಂಬುದರ ಕುರಿತು ಮುಖ್ಯಮಂತ್ರಿಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ. ಅವರು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಶಾಸಕರು ಅದನ್ನು ವಿರೋಧಿಸುವುದು ಸರಿಯಲ್ಲ ಎಂದು ನಡ್ಡಾ ಆಕ್ಷೇಪಿಸಿದ್ದಾರೆ.
ಮುಂದೆ ಯಾವುದೇ ಶಾಸಕರು ಪ್ರತ್ಯೇಕ ಸಭೆ ನಡೆಸುವುದು ಇಲ್ಲವೆ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದರೆ ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಭಿನ್ನಮತೀಯ ಚಟುವಟಿಕೆಗಳಿಗೆ ಅವಕಾಶ ಕೊಡಲೇಬಾರದು ಎಂದು ಖಡಕ್ ಆಗಿ ಹೇಳಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ಯಾರಿಗೂ ಶೋಭೆ ತರುವುದಿಲ್ಲ. ಸಂಪುಟ ವಿಸ್ತರಣೆ ಮಾಡಿ ಎಂದು ಕೆಲವರು ಒತ್ತಡ ಹಾಕಿದರೆ, ಇನ್ನೂ ಕೆಲವರು ನಮಗೆ ಮಂತ್ರಿಸ್ಥಾನ ಬೇಕೆಂದು ಬ್ಲಾಕ್‍ಮೇಲ್ ಮಾಡುತ್ತಿದ್ದಾರೆ.
ಲಕ್ಷ್ಮಣ ಸವದಿಯನ್ನು ಸಂಪುಟಕ್ಕೆ ತೆಗೆದುಕೊಂಡಿದ್ದರ ಹಿಂದೆ ಸಾಕಷ್ಟು ರಾಜಕೀಯ ಲೆಕ್ಕಾಚಾರಗಳಿವೆ. ಈಗ ಯೋಗೀಶ್ವರ್ ತೆಗೆದುಕೊಳ್ಳುತ್ತಿರುವುದರ ಹಿಂದೆ ಇದೇ ತಂತ್ರ ಇದೆ. ಪಕ್ಷದ ತೀರ್ಮಾನವನ್ನು ಶಾಸಕರು ಪ್ರಶ್ನಿಸಬಾರದು. ಈ ಬಗ್ಗೆ ಎಲ್ಲರಿಗೂ ತಿಳಿ ಹೇಳಿ ಎಂದು ಕಟೀಲ್‍ಗೆ ತಾಕೀತು ಮಾಡಿದ್ದಾರೆ. ಸ್ವತಃ ರಾಷ್ಟ್ರೀಯ ಅಧ್ಯಕ್ಷರಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ನಳಿನ್‍ಕುಮಾರ್ ಕಟೀಲ್ ಶಾಸಕರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಯಾವುದೇ ಕಾರಣಕ್ಕೂ ಸಭೆಗಳನ್ನು ನಡೆಸಬಾರದು. ಇದನ್ನು ಪಕ್ಷವು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಇನ್ನೊಂದೆಡೆ ನಿನ್ನೆ ಶಾಸಕರ ಭವನದಲ್ಲಿ ಸಭೆ ನಡೆಸಿದ ಕೆಲವರ ಜತೆ ಖುದ್ದು ಯಡಿಯೂರಪ್ಪ ಕೂಡ ಕಳೆದ ರಾತ್ರಿ ದೂರವಾಣಿಯಲ್ಲಿ ಸಂಪರ್ಕಿಸಿ ಮುಂದೆ ಸಭೆಗಳನ್ನು ನಡೆಸದಂತೆ ಸೂಚಿಸಿದ್ದಾರೆ. ನಿಮ್ಮ ಸಮಸ್ಯೆಗಳೇನೇ ಇದ್ದರೂ ನನ್ನ ಬಳಿ ಬಂದು ಚರ್ಚೆ ಮಾಡಿ. ಕ್ಷೇತ್ರಕ್ಕೆ ಬೇಕಾದ ಅನುದಾನ, ವರ್ಗಾವಣೆ ಸೇರಿದಂತೆ ನಿಮ್ಮ ನಿಮ್ಮ ಕ್ಷೇತ್ರಗಳ ಯಾವುದೇ ಕೆಲಸಗಳಿದ್ದರೂ ಮಾಡಿಕೊಡಲಾಗುವುದು. ಅನಗತ್ಯವಾಗಿ ಗೊಂದಲ ಸೃಷ್ಟಿಸಬಾರದು ಎಂದು ಬಿಎಸ್‍ವೈ ಸೂಚನೆ ಕೊಟ್ಟಿದ್ದಾರೆ.
ನಾನು ಸಂಪುಟಕ್ಕೆ ತೆಗೆದುಕೊಳ್ಳಲು ಸಿದ್ಧನಿದ್ದೇನೆ. ಆದರೆ, ಪರಿಸ್ಥಿತಿ ನನ್ನ ಕೈಕಟ್ಟಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕೆಂದು ಯಡಿಯೂರಪ್ಪ ಶಾಸಕರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.