Breaking News

ಬೀಳೂರು ಅಜ್ಜನ ಶಿಕ್ಷಣ ಸೇವೆ ಇಂದಿಗೂ ಆದರ್ಶ: ಡಾ. ಕಟಗಿಹಳ್ಳಿಮಠ

Spread the love

ಬಾಗಲಕೋಟೆ : ಜನರಲ್ಲಿ ಶಿಕ್ಷಣ, ಸಂಸ್ಕಾರ, ಸದಾಚಾರ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಮಠಗಳ ಪರಂಪರೆ ಪ್ರಮುಖವಾಗಿದ್ದು, ಶಿಕ್ಷಣ ಕ್ರಾಂತಿಯಲ್ಲಿ ಬೀಳೂರು ಗುರುಬಸವ ಮಹಾಸ್ವಾಮಿಗಳ ಶ್ರಮ ಸ್ಮರಣೀಯವಾಗಿದೆ ಎಂದು ಬಿವ್ಹಿವ್ಹಿ ಸಂಘದ ಆಡಳಿತಾಧಿಕಾರಿಗಳಾದ ಡಾ. ವ್ಹಿ.ಎಸ್. ಕಟಗಿಹಳ್ಳಿಮಠ ಹೇಳಿದರು.

ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಎನ್‌‌.ಎಸ್‌.ಎಸ್ ಹಾಗೂ ಎನ್‌ಸಿಸಿ ಘಟಕಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಿವಿವಿ ಸಂಘದ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮವನ್ನು ಬೀಳೂರು ಗುರುಬಸವ ಮಹಾಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಾಧಕರ ಹುಟ್ಟು ಮತ್ತು ಬೆಳವಣಿಗೆಗೆಗಳು ಲೋಕಸಹಜವಾಗಿರುವುದಿಲ್ಲ ಅದಕ್ಕಾಗಿ ಅವರನ್ನು ಅವತಾರ ಪುರುಷರು ಎನ್ನುತ್ತೇವೆ ಅಂತವರಲ್ಲಿ ಬೀಳೂರು ಅಜ್ಜನವರು ಒಬ್ಬರು ಎಂದರು.

ನೂರಾರು ವರ್ಷಗಳ ಹಿಂದಿನಿ ಇತಿಹಾಸದಲ್ಲಿ ಎಸ್.ಎಸ್.ಎಲ್.ಸಿ ಶಿಕ್ಷಣಕ್ಕೂ ಪರದಾಡುವ ಪರಿಸ್ಥಿತಿ ಅಂಚೆ ಪತ್ರಗಳನ್ನೂ ಓದುವ ಸಾಮರ್ಥ್ಯ ಇರದಂತಹ ಅನಕ್ಷರತೆ ಇತ್ತು‌. ಇಂತಹ ಸಂದರ್ಭದಲ್ಲಿ ಅಥಣಿ ಮುರಘೇಂದ್ರ ಸ್ವಾಮೀಜಿ, ಬಿಳೂರು ಗುರು ಬಸವ ಸ್ವಾಮೀಜಿ ಹಾಗೂ ಬಿದರಿಯ ಕುಮಾರ ಸ್ವಾಮೀಜಿಗಳ ನಿಷ್ಠೂರ ಸನ್ಯಾಸತ್ವ, ಶಿವಯೋಗ, ಹಠಯೋಗದಿಂದ ಆಧ್ಯಾತ್ಮಿಕ ಬೆಳವಣಿಗೆ,ಸಮಾಜ ಸೇವೆ ಮತ್ತು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಮಾಡಿದ ಸಾಧನೆ ಅಪಾರವಾಗಿದೆ. ಬೀಳೂರು ಅಜ್ಜನವರು ಬಾಲ್ಯದಲ್ಲಿಯೇ ತೇಜಸ್ಸು ಹಾಗೂ ಕಾರ್ಯನಿಷ್ಠೆಯನ್ನು ಹೊಂದಿದ್ದರು. ಅವರು ಸದಾ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸುವುದರ ಜೊತೆಗೆ ಮಕ್ಕಳನ್ನು ಶಿಕ್ಷಣದತ್ತ ಕರೆತರುವ ಕೆಲಸ ಮಾಡಿದ್ದಾರೆ. ದೇಶದಲ್ಲಿಯೇ ತಾಲ್ಲೂಕು ಮಟ್ಟದಲ್ಲಿ ಶಾಲೆಯನ್ನು ಆರಂಭಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಧಾರ್ಮಿಕ ಮೌಲ್ಯಗಳ ಜತೆಗೆ ಮಾನವೀಯತೆ, ಸೇವಾ ಮನೋಭಾವ, ಶಿಸ್ತು ಹಾಗೂ ಸತ್ಯನಿಷ್ಠೆಯನ್ನು ಸಮಾಜದಲ್ಲಿ ಬೆಳೆಸಲು ಶ್ರಮಿಸಿದ್ದರು. ಅವರ ಸರಳ ಜೀವನ, ಆಧ್ಯಾತ್ಮಿಕ ಚಿಂತನೆ ಮತ್ತು ಸಮಾಜಮುಖಿ ಕಾರ್ಯಗಳು ಇಂದಿಗೂ ಆದರ್ಶಮಯ ಎಂದು ಹೇಳಿದರು.

ಒಂದು ಸಂಸ್ಕೃತ ಪಾಠಶಾಲೆಯಿಂದ ಆರಂಭವಾದ ಬಿವಿವಿ ಸಂಘದ ಶಿಕ್ಷಣ ಸೇವೆ ಇಂದು ನೂರಾ ತೊಂಬಂತ್ತು ಸಂಸ್ಥೆಗಳಿಗೆ ವ್ಯಾಪಿಸಿದೆ ಇದಕ್ಕೆ ಅಜ್ಜನ ಆಶಿರ್ವಾದ ಸಂಘದ ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆಯೇ ಕಾರಣ. ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಶಿಕ್ಷಿತರನ್ನು ಹುಟ್ಟು ಹಾಕಿದ ಕೀರ್ತಿ ಬಾಗಲಕೋಟೆಯ ಭಾಗಕ್ಕೆ ಸಲ್ಲುತ್ತದೆ ಎನ್ನುವುದು ಹೆಮ್ಮೆಯ ಸಂಗತಿ. ಮೂಲಭೂತ ವ್ಯವಸ್ಥೆಗಳು ಇಲ್ಲದ ಸಂದರ್ಭದಲ್ಲಿಯೂ ಹಲವಾರು ಜನ ಶಿಕ್ಷಕರು ಬಾಂಬೆ, ಮದ್ರಾಸ್ ಭಾಗದಿಂದ ಬಂದು ಇಲ್ಲಿ ಶಿಕ್ಷಣ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣಾರ್ಥಿಗಳಿಗೆ ವಸತಿ, ಆಹಾರ ಸೌಲಭ್ಯ ನೀಡಲು ವಾರದ ಮನೆ, ಪ್ರಸಾದ ನಿಲಯಗಳನ್ನು ಪ್ರಾರಂಭಿಸಿದ ಕೀರ್ತಿ ಲಿಂಗಾಯತ ಕುಟುಂಬಗಳಿಗೆ ಸಲ್ಲುತ್ತದೆ. ಗುರುಬಸವ ಸ್ವಾಮೀಜಿಗಳು ಹಾಕಿಕೊಟ್ಟ ಹಾದಿಯಲ್ಲಿ ನಡೆದು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಉಪನ್ಯಾಸಕರು ಭಕ್ತಿಯಿಂದ ಮತ್ತು ಪ್ರೀತಿಯಿಂದ ಕೆಲಸ ಮಾಡಿ ಇಂದಿನ ಮಕ್ಕಳನ್ನು ಋಣಾತ್ಮಕ ಚಿಂತನೆಯಿಂದ ಧನಾತ್ಮಕದೆಡೆಗೆ ಕರೆತರುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಚಾರ್ಯ ಎಸ್.ಆರ್. ಮೂಗನೂರಮಠ ಅವರು ಮಾತನಾಡಿ ನೂರಾ ಇಪ್ಪತ್ತು ವರ್ಷಗಳ ಹಿಂದೆ ಬಿತ್ತಿದ ಶಿಕ್ಷಣದ ಬೀಜ ಇಂದು ಹೆಮ್ಮರವಾಗಿ ಬೆಳೆದಿದೆ. ಶಿಕ್ಷಣ ಸಂಸ್ಥೆಗಳ ಮೂಲಕ ಯುವಜನರಿಗೆ ಜ್ಞಾನ, ಸಂಸ್ಕಾರ ಮತ್ತು ಉತ್ತಮ ಮೌಲ್ಯಗಳನ್ನು ನೀಡಬೇಕೆಂಬ ಅವರ ಕನಸನ್ನು ಬಿವಿವಿ ಸಂಘ ನನಸು ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಡಾ. ಎ.ಯು ರಾಠೋಡ, ಎನ್.ಎಸ್.ಎಸ್ ಘಟಕಗಳ ಕಾರ್ಯಕ್ರಮಾಧಿಕಾರಿಗಳಾದ ಡಾ.ಎಮ್.ಎಚ್. ವಡ್ಡರ, ಡಾ.ವೀರುಪಾಕ್ಷ ಎನ್.ಬಿ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಎಮ್.ಎಮ್ ದೇವನಾಳ ಸೇರಿದಂತೆ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಕಲಬುರಗಿಯಲ್ಲಿ ಭೀಕರ ಅಪಘಾತ – ತಾಯಿಯೊಂದಿಗೆ 3 ತಿಂಗಳ ಮಗು ಸ್ಥಳದಲ್ಲೇ ಸಾವು

Spread the loveಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ ಹೊರವಲಯದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ  ತಾಯಿಯೊಂದಿಗೆ ಮೂರು ತಿಂಗಳ ಮಗು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ