Breaking News

ಮೋದಿ ಸಂಪುಟ ಪುನರ್‌ರಚನೆಗೆ ವೇದಿಕೆ ಸಿದ್ಧ? – ಯುವ ಮುಖಗಳು, ಮಿತ್ರಪಕ್ಷಗಳಿಗೆ ಆದ್ಯತೆ

Spread the love

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಮತ್ತೊಂದು ಮಹತ್ವದ ಪುನರ್‌ರಚನೆ ನಡೆಯುವ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ತೀವ್ರಗೊಂಡಿದೆ. ಮುಂಬರುವ ವಿಧಾನಸಭಾ ಚುನಾವಣೆಗಳು, ಸಚಿವರ ಕಾರ್ಯಕ್ಷಮತೆ, ಪ್ರಾದೇಶಿಕ ಸಮತೋಲನ ಹಾಗೂ ಮಿತ್ರಪಕ್ಷಗಳ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಸಂಪುಟಕ್ಕೆ ಹೊಸ ಮುಖಗಳನ್ನು ಸೇರ್ಪಡೆ ಮಾಡುವ ಸಾಧ್ಯತೆ ಇದೆ.

ಪ್ರಸ್ತುತ ಕೇಂದ್ರ ಸಚಿವ ಸಂಪುಟದಲ್ಲಿ ಸುಮಾರು 69 ಸಚಿವರಿದ್ದಾರೆ. ಗರಿಷ್ಠ 81 ಸಚಿವರಿಗೆ ಅವಕಾಶವಿದೆ. ಹೀಗಾಗಿ, ಹೆಚ್ಚುವರಿ ಸಚಿವರನ್ನು ಸೇರ್ಪಡೆಗೊಳಿಸಲು ಸರ್ಕಾರಕ್ಕೆ ಅವಕಾಶವಿದೆ. ಆದರೆ, ಕೇವಲ ಖಾಲಿ ಸ್ಥಾನಗಳನ್ನು ತುಂಬುವುದಕ್ಕಿಂತ ರಾಜಕೀಯ ಮತ್ತು ಆಡಳಿತಾತ್ಮಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪುನರ್‌ರಚನೆ ಮಾಡುವ ಸಾಧ್ಯತೆಯೇ ಹೆಚ್ಚಾಗಿದೆ.

ಇತ್ತೀಚೆಗೆ ಬಿಜೆಪಿ ತನ್ನ ರಾಷ್ಟ್ರೀಯ ಸಂಘಟನೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಿದೆ. ನಿತಿನ್ ನಬಿನ್ ನೇತೃತ್ವದ ಹೊಸ ರಾಷ್ಟ್ರೀಯ ತಂಡದಲ್ಲಿ 65 ಮಂದಿ ಇದ್ದು, ಅದರಲ್ಲಿ 51 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಹಿರಿಯ ನಾಯಕರಿಗೆ ವಿವಿಧ ಸಂಘಟನಾ ಜವಾಬ್ದಾರಿಗಳನ್ನು ನೀಡುವುದರ ಜತೆಗೆ ಯುವ ಮುಖಗಳು ಮತ್ತು ಹೊಸ ಪೀಳಿಗೆಯ ನಾಯಕರಿಗೆ ಆದ್ಯತೆ ನೀಡಲಾಗಿದೆ.

ಈ ಸಂಘಟನಾ ಪುನರ್‌ವಿನ್ಯಾಸದ ನಂತರ ಈಗ ಸರ್ಕಾರದ ತಂಡದಲ್ಲೂ ಇದೇ ರೀತಿಯ ಬದಲಾವಣೆ ಸಾಧ್ಯ ಎಂಬ ಚರ್ಚೆ ನಡೆಯುತ್ತಿದೆ. 2027ರ ವಿಧಾನಸಭಾ ಚುನಾವಣೆಗಳು ಹಾಗೂ 2029ರ ಲೋಕಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ‘ಸಂಘಟನೆ + ಸರ್ಕಾರ’ ಎರಡನ್ನೂ ಚುನಾವಣೆಗೆ ಸಜ್ಜುಗೊಳಿಸುವ ತಂತ್ರದ ಭಾಗವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಸಂಪುಟ ಪುನರ್‌ರಚನೆಯಲ್ಲಿ ಪೀಳಿಗೆಯ ಬದಲಾವಣೆ ಪ್ರಮುಖ ಅಂಶವಾಗುವ ಸಾಧ್ಯತೆ ಇದೆ. 2024ರಲ್ಲಿ ಮೋದಿ 3.0 ಸರ್ಕಾರ ಅಧಿಕಾರಕ್ಕೆ ಬಂದಾಗ ಸಚಿವರ ಪೈಕಿ ಶೇ.65ಕ್ಕೂ ಹೆಚ್ಚು ಮಂದಿ 51ರಿಂದ 70 ವರ್ಷದೊಳಗಿನವರಾಗಿದ್ದರು. ಸುಮಾರು ಶೇ.24ರಷ್ಟು ಮಂದಿ 31–50ರ ವಯೋಮಾನದವರಾಗಿದ್ದರು. ಈಗ 70 ವರ್ಷ ಮೇಲ್ಪಟ್ಟ ಸಚಿವರೂ ಇದ್ದಾರೆ. ಹೀಗಾಗಿ ಅನುಭವ ಹೊಂದಿರುವ ಹಿರಿಯ ನಾಯಕರ ಜತೆಗೆ ಯುವ ಸಂಸದರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಚಿಂತನೆ ಇದೆ ಎನ್ನಲಾಗಿದೆ. ಇದು ಕೇವಲ ವಯಸ್ಸಿನ ಆಧಾರದ ಬದಲಾವಣೆ ಆಗದೆ, ಮುಂದಿನ ಒಂದು ದಶಕದ ಬಿಜೆಪಿ ನಾಯಕತ್ವವನ್ನು ರೂಪಿಸುವ ಪ್ರಯತ್ನವಾಗಿಯೂ ಕಾಣಬಹುದು.

ಮಹಿಳೆಯರಿಗೆ ಪ್ರಾತಿನಿಧ್ಯ ಹೆಚ್ಚಳ?
ಸಂಪುಟ ಪುನರ್‌ರಚನೆಯಲ್ಲಿ ಮಹಿಳಾ ಪ್ರಾತಿನಿಧ್ಯವೂ ಮತ್ತೊಂದು ಪ್ರಮುಖ ಮಾನದಂಡವಾಗಬಹುದು. ಬಿಜೆಪಿ ತನ್ನ ಸಂಘಟನಾ ತಂಡದಲ್ಲಿ ಮಹಿಳೆಯರು, ಯುವಕರು ಹಾಗೂ ವಿವಿಧ ಸಾಮಾಜಿಕ ವರ್ಗಗಳಿಗೆ ಪ್ರಾತಿನಿಧ್ಯ ನೀಡುವ ಪ್ರಯತ್ನ ಮಾಡಿರುವ ಹಿನ್ನೆಲೆಯಲ್ಲಿ, ಸರ್ಕಾರದಲ್ಲೂ ಈ ಸಮತೋಲನವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಇದೆ.

ಮಿತ್ರಪಕ್ಷಗಳಿಗೂ ಹೆಚ್ಚುವರಿ ಸ್ಥಾನ?
ಮೋದಿ 3.0 ಸರ್ಕಾರವು ಎನ್‌ಡಿಎ ಮೈತ್ರಿಕೂಟದ ಆಧಾರದ ಮೇಲೆ ಮುಂದುವರಿಯುತ್ತಿರುವುದರಿಂದ ಸಂಪುಟ ಪುನರ್‌ರಚನೆಯಲ್ಲಿ ಮಿತ್ರಪಕ್ಷಗಳ ಪಾತ್ರವೂ ಮಹತ್ವದ್ದಾಗಿದೆ. ವಿಶೇಷವಾಗಿ ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ ಪ್ರಮುಖ ರಾಜ್ಯಗಳ ರಾಜಕೀಯ ಸಮೀಕರಣಗಳು ಗಮನದಲ್ಲಿರಬಹುದು.

ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಲೋಕಸಭೆಯಲ್ಲಿ 13 ಸಂಸದರು ಇರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಸಚಿವ ಸ್ಥಾನಕ್ಕಾಗಿ ಬೇಡಿಕೆ ಬರುವ ಸಾಧ್ಯತೆ ಕುರಿತು ಚರ್ಚೆ ನಡೆದಿದೆ. ಶಿಂಧೆ ಪುತ್ರ ಶ್ರೀಕಾಂತ್ ಶಿಂಧೆ ಅವರ ಹೆಸರು ಸಚಿವ ಸ್ಥಾನಕ್ಕೆ ಸಂಬಂಧಿಸಿದ ಊಹಾಪೋಹಗಳಲ್ಲಿ ಕೇಳಿಬರುತ್ತಿದೆ. ಆದರೆ ಇದುವರೆಗೆ ಯಾವುದೇ ಅಧಿಕೃತ ನಿರ್ಧಾರ ಪ್ರಕಟವಾಗಿಲ್ಲ. ಇದೇ ವೇಳೆ ಬಿಹಾರದಲ್ಲಿ ಜೆಡಿಯು ಸೇರಿದಂತೆ ಎನ್‌ಡಿಎ ಮಿತ್ರಪಕ್ಷಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಸಾಧ್ಯತೆಯೂ ಚರ್ಚೆಯಲ್ಲಿದೆ. ಮೇ ತಿಂಗಳ ವರದಿಗಳಲ್ಲಿಯೂ ಜೆಡಿಯು, ಟಿಡಿಪಿ, ಎನ್‌ಸಿಪಿ ಹಾಗೂ ಇತರ ಮಿತ್ರಪಕ್ಷಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿತ್ತು.

ಒಂದಕ್ಕಿಂತ ಹೆಚ್ಚು ಖಾತೆ ಹೊಂದಿರುವ ಸಚಿವರ ಮೇಲೂ ಗಮನ
ಪ್ರಸ್ತುತ ಹಲವು ಹಿರಿಯ ಸಚಿವರು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ. ಅಮಿತ್ ಶಾ, ಜೆ.ಪಿ. ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್, ಮನೋಹರ್ ಲಾಲ್, ಹೆಚ್.ಡಿ.ಕುಮಾರಸ್ವಾಮಿ, ಅಶ್ವಿನಿ ವೈಷ್ಣವ್, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ಮನ್ಸುಖ್ ಮಾಂಡವಿಯಾ ಸೇರಿದಂತೆ ಹಲವು ಸಚಿವರ ಬಳಿ ಒಂದಕ್ಕಿಂತ ಹೆಚ್ಚು ಜವಾಬ್ದಾರಿಗಳಿವೆ.

ಹೊಸ ಸಚಿವರನ್ನು ನೇಮಿಸುವ ಮೂಲಕ ಕೆಲವು ಸಚಿವರ ಮೇಲಿರುವ ಹೆಚ್ಚುವರಿ ಹೊರೆ ಕಡಿಮೆ ಮಾಡುವುದು ಹಾಗೂ ಪ್ರಮುಖ ಸಚಿವಾಲಯಗಳ ಕೆಲಸವನ್ನು ಹೆಚ್ಚು ಪರಿಣಾಮಕಾರಿಯಾಗಿ ಹಂಚಿಕೆ ಮಾಡುವುದು ಪುನರ್‌ರಚನೆಯ ಉದ್ದೇಶಗಳಲ್ಲೊಂದಾಗಬಹುದು.

ಕೆಲವು ಸಚಿವರಿಗೆ ಕೊಕ್ ಅಥವಾ ಖಾತೆ ಬದಲಾವಣೆ?
ಸಂಪುಟ ಪುನರ್‌ರಚನೆಯ ಸಂದರ್ಭದಲ್ಲಿ ಕಾರ್ಯಕ್ಷಮತೆ ಕೂಡ ಪ್ರಮುಖ ಮಾನದಂಡವಾಗಬಹುದು. ಉತ್ತಮ ಪ್ರದರ್ಶನ ನೀಡದ ಸಚಿವರನ್ನು ಕೈಬಿಡುವುದು, ಕೆಲವರ ಖಾತೆ ಬದಲಿಸುವುದು ಅಥವಾ ಸಂಘಟನಾ ಜವಾಬ್ದಾರಿಗೆ ಕಳುಹಿಸುವ ಸಾಧ್ಯತೆಯ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಇದೆ. ಅಶ್ಚಿನಿ ವೈಷ್ಣವ್ ಪ್ರಮುಖ ಐದು ಸಚಿವರಲ್ಲಿ ಒಬ್ಬರಾಗಿ ಬಡ್ತಿ ಪಡೆಯಬಹುದು. ನಿತಿನ್ ಗಡ್ಕರಿ ಖಾತೆ ಬದಲಾಗಬಹುದು. ಪ್ರಹ್ಲಾದ್ ಜೋಶಿ ಅವರಿಂದ ಶಿಕ್ಷಣ ಖಾತೆ ಮರಳಿ ಪಡೆಯಬಹುದು ಎನ್ನಲಾಗುತ್ತಿದೆ.

ರೈಲ್ವೆ ರಾಜ್ಯ ಸಚಿವ ರವ್ನೀತ್ ಸಿಂಗ್ ಬಿಟ್ಟು ಅವರ ರಾಜ್ಯಸಭಾ ಅವಧಿ ಜೂನ್ 21ರಂದು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಸಚಿವ ಸ್ಥಾನದಿಂದ ಹೊರಬಂದಿದ್ದಾರೆ. ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅವರ ರಾಜ್ಯಸಭಾ ಅವಧಿಯೂ ಮುಕ್ತಾಯಗೊಂಡಿದ್ದು, ಮರುನಾಮನಿರ್ದೇಶನವಾಗದ ಹಿನ್ನೆಲೆಯಲ್ಲಿ ಅವರು ಸಚಿವ ಸಂಪುಟದಿಂದ ಹೊರಬಂದಿದ್ದಾರೆ. ಈ ಸ್ಥಾನಗಳಿಗೆ ಹೊಸ ಮುಖಗಳನ್ನು ತರುವ ಅವಕಾಶವೂ ಈಗ ಕೇಂದ್ರ ಸರ್ಕಾರದ ಮುಂದಿದೆ.


Spread the love

About Laxminews 24x7

Check Also

ಕಲಬುರಗಿಯಲ್ಲಿ ಭೀಕರ ಅಪಘಾತ – ತಾಯಿಯೊಂದಿಗೆ 3 ತಿಂಗಳ ಮಗು ಸ್ಥಳದಲ್ಲೇ ಸಾವು

Spread the loveಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ ಹೊರವಲಯದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ  ತಾಯಿಯೊಂದಿಗೆ ಮೂರು ತಿಂಗಳ ಮಗು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ