ಭೂಪಾಲ್, ಜೂ.7- ಅನಾರೋಗ್ಯದಿಂದ ಚಿಕಿತ್ಸೆ ಪಡೆದು ಹಣ ಪಾವತಿಸಲು ವಿಳಂಬ ಮಾಡಿದ ಬಡ ವೃದ್ಧರೊಬ್ಬರನ್ನು ಆಸ್ಪತ್ರೆಯ ಬೆಡ್‍ಗೆ ಕಟ್ಟಿ ಹಾಕಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಭೂಪಾಲ್‍ನಲ್ಲಿ ನಡೆದಿದೆ.
ಘಟನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಶಿವರಾಜ್‍ಸಿಂಗ್ ಚೌಹಾಣ್ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಅನಾರೋಗ್ಯದಿಂದ ಚಿಕಿತ್ಸೆ ಪಡೆದ ವೃದ್ಧರೊಬ್ಬರು 11 ಸಾವಿರ ರೂ.ಗಳನ್ನು ಶಾಜಿಪುರದಲ್ಲಿ ಖಾಸಗಿ ಆಸ್ಪತ್ರೆಗೆ ಪಾವತಿಸಬೇಕಿತ್ತು. ಹಣವಿಲ್ಲದ ಕಾರಣ ಪಾವತಿ ವಿಳಂಬವಾಯಿತು. ಆದರೆ, ಆಸ್ಪತ್ರೆ ಸಿಬ್ಬಂದಿ ಅವರನ್ನು ಬೆಡ್‍ಗೆ ಕೈ-ಕಾಲುಗಳಿಗೆ ಹಗ್ಗ ಬಿಗಿದು ಕಟ್ಟಿಹಾಕಿದ್ದರು ಎಂದು ವರದಿಯಾಗಿದೆ.
ಆದರೆ, ಆಸ್ಪತ್ರೆ ಸಿಬ್ಬಂದಿ ವೃದ್ಧರಿಗೆ ಸೆಳೆತ ಸಮಸ್ಯೆ ಕಾರಣ ಅವರನ್ನು ಕಟ್ಟಿಹಾಕಲಾಗಿತ್ತೇ ಹೊರತು ಹಣ ಬಾಕಿ ಪಾವತಿಗಾಗಿ ಅಲ್ಲ ಎಂದು ಹೇಳಿಕೊಂಡಿದೆ. ನಾವು ವೃದ್ಧರನ್ನು ಆಸ್ಪತ್ರೆಗೆ ಸೇರಿಸುವಾಗ 5 ಸಾವಿರ ರೂ. ಪಾವತಿ ಮಾಡಿದ್ದೆವು. ಚಿಕಿತ್ಸಾ ವೆಚ್ಚ 11 ಸಾವಿರ ರೂ. ಆಗಿತ್ತು.
ನಮ್ಮಲ್ಲಿ ಹಣವಿರಲಿಲ್ಲ. ಅದನ್ನು ಹೊಂದಿಸಿ ತರಲು ವಿಳಂಬವಾಗಿತ್ತು. ಇಷ್ಟಕ್ಕೇ ಆಸ್ಪತ್ರೆ ಸಿಬ್ಬಂದಿ ವೃದ್ಧರನ್ನು ಕಟ್ಟಿಹಾಕಿದ್ದಾರೆ ಎಂದು ಅವರ ಸಂಬಂಧಿಕರೊಬ್ಬರು ಆರೋಪಿಸಿದ್ದಾರೆ. ನಂತರ ಆಸ್ಪತ್ರೆ 11 ಸಾವಿರ ರೂ.ಗಳನ್ನು ಮನ್ನಾ ಮಾಡಿ ವೃದ್ಧರನ್ನು ಬಿಡುಗಡೆ ಮಾಡಿದೆ.