ಬೆಳಗಾವಿ ; ಇಡೀ ರಾಜ್ಯವೇ ಕೊರೋನಾ ವೈರಸ್ ಮಹಾಮಾರಿ ವಿರುದ್ಧ ಹೋರಾಟದಲ್ಲಿ ತೊಡಗಿಕೊಂಡಿದೆ. ಇಂತಹ ಸಂದರ್ಭದಲ್ಲಿ ಬೆಳಗಾವಿಯ ಪ್ರಮುಖ ಕಚೇರಿಯೊಂದು ಮಂಗಳೂರಿಗೆ ಎತ್ತಂಗಡಿ ಆಗಿದೆ. ಇದು ಉತ್ತರ ಕರ್ನಾಟಕ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬೆಳಗಾವಿಯ ಕೆಶಿಪ್ ಕಚೇರಿ ಹಾಸನಕ್ಕೆ ವರ್ಗವಾಗಿತ್ತು. ಇದು ಉತ್ತರ ಕರ್ನಾಟಕ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ನಂತರ ವಿಟಿಯು ಸ್ಥಳಾಂತರಕ್ಕೆ ಯತ್ನ ನಡೆಯಿತು. ಆದರೆ, ಇದು ಸಾಧ್ಯವಾಗಿರಲಿಲ್ಲ. ಸಮ್ಮಿಶ್ರ ಸರ್ಕಾರದ ಸೂಪರ್ ಸಿಎಂ ಎಚ್ .ಡಿ. ರೇವಣ್ಣ ಇದರ ಹಿಂದೆ ಇದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು.
ಇದೀಗ, ಬೆಳಗಾವಿ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರ ಕಚೇರಿ ಬೆಳಗಾವಿಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸ್ಥಳಾಂತರವಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ಈ ನಿರ್ಧಾರ ಮಾಡಿದೆ. ಇದು ಉತ್ತರ ಕರ್ನಾಟಕ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗಾವಿ ಜಿಲ್ಲೆ ಓರ್ವ ಕೇಂದ್ರ ಸಚಿವ, ಓರ್ವ ಡಿಸಿಎಂ, ಮೂರು ಜನ ಪ್ರಭಾವಿ ಸಚಿವರು ಹಾಗೂ ವಿಧಾನಸಭೆ ಡೆಪ್ಯುಟಿ ಸ್ಪೀಕರ್, 2 ನಿಗಮದ ಅಧ್ಯಕ್ಷ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿಯನ್ನು ನೀಡಿದೆ.
ಇಷ್ಟೆಲ್ಲ ಪ್ರಭಾವ ಇದ್ದರೂ ಏಕಾಏಕಿ ಕಚೇರಿ ಸ್ಥಳಾಂತರ ಯಾರ ಗಮನಕ್ಕೆ ಬಾರದೇ ಇರೋದು ಸಹ ಅನುಮಾನಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ನಾಲ್ವರು ಸಚಿವರಿದ್ದರೂ ಜಿಲ್ಲಾ ಉಸ್ತುವಾರಿ ಹೊಣೆಯನ್ನು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೆಗಲಿಗೆ ಹಾಕಲಾಗಿದೆ. ಈ ಬಗ್ಗೆ ಮಾತನಾಡಿದ ರಮೇಶ ಜಾರಕಿಹೊಳಿ, ಜಗದೀಶ ಶೆಟ್ಟರ್ ಜಿಲ್ಲಾ ಉಸ್ತುವಾರಿ ಸಚಿವ ಇದ್ದರೆ ನಾನು ಇದ್ದ ಹಾಗೇ ಎಂದು ಸಮರ್ಥಿಸಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಗೆ ಅನ್ಯಾಯವಾದ ಸಂದರ್ಭದಲ್ಲಿಯೂ ಎಲ್ಲಾ ಸಚಿವರು ಹಾಗೂ ಶಾಸಕರು ಮಾತ್ರ ಮೌನ ವಹಿಸಿದ್ದಾರೆ. ಈ ಕಚೇರಿ ಸ್ಥಳಾಂತರ ವಿಚಾರ ಯಾರ ಗಮನಕ್ಕೆ ಬಂದಿಲ್ಲವೇ? ಎಂಬ ಪ್ರಶ್ನೆ ಉದ್ಭವಿಸಿದೆ. ಕೊರೋನಾ ವೈರಸ್ ಮಹಾಮಾರಿಯ ಅಬ್ಬರ ನಿಯಂತ್ರಿಸುವಲ್ಲಿ ಎಲ್ಲರೂ ತೊಡಗಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಕಚೇರಿ ಸ್ಥಳಾಂತರ ಅವಶ್ಯಕತೆ ಏನಿತ್ತು? ಎಂದು ಬೆಳಗಾವಿ ಜನ ಪ್ರಶ್ನಿಸುತ್ತಿದ್ದಾರೆ.