ಬೆಂಗಳೂರು: ಲಾಕ್‍ಡೌನ್ ಮಧ್ಯೆ ಎಣ್ಣೆ ಬೇಕು ಎಣ್ಣೆ ಅಂತ ಗಲ್ಲಿಗಲ್ಲಿಯ ಸಂದಿ ಮೂಲೆಯಲ್ಲಿ ಸುತ್ತಾಡುತ್ತಿದ್ದ ಕುಡುಕರಿಗೆ ಅಬಕಾರಿ ಇಲಾಖೆ ಬಿಗ್‍ಶಾಕ್ ನೀಡಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇತ್ತೀಚೆಗೆ ಮಾತನಾಡಿ, ಏಪ್ರಿಲ್ 14ರವರಗೆ ಮದ್ಯದದಂಗಡಿ ತೆರೆಯಲು ಅನುಮತಿ ನೀಡುವುದಿಲ್ಲ. ಏ.14ರ ಬಳಿಕ ಪರಿಸ್ಥಿತಿ ನೋಡಿಕೊಂಡು ಮದ್ಯದಂಗಡಿ ತೆರೆಯಬೇಕೋ ಬೇಡ್ವೋ ಎಂಬುದನ್ನು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದರು. ಆದರೆ ಕೆಲವರು ಅಕ್ರಮವಾಗಿ ಮದ್ಯ ಮಾರಾಟ ನಡೆಸಿದ್ದರು. ಇದಕ್ಕೆ ಬ್ರೇಕ್ ಹಾಕಲು ಅಬಕಾರಿ ಇಲಾಖೆ ಮುಂದಾಗಿದೆ.
ಬೆಂಗಳೂರಿನಲ್ಲಿ ಈಗಾಗಲೇ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ 3,800 ಬಾರ್‍ಗಳಿಗೂ ಸೀಲ್ ಹಾಕಲಾಗಿದೆ. ಅಷ್ಟೇ ಅಲ್ಲದೆ ನಗರದಲ್ಲಿ 54 ಅಬಕಾರಿ ಇಲಾಖೆ ವೆಹಿಕಲ್ಸ್ ರೌಂಡ್ಸ್ ಹಾಕುತ್ತಿವೆ. ಅಕ್ರಮ ಮದ್ಯ ಮಾರಾಟ ಮಾಡಿದ್ದು, ಎಣ್ಣೆ ತಗೆದುಕೊಳ್ಳುವುದು ಕಂಡು ಬಂದರೆ ಅಂತವರನ್ನ ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ಯುತ್ತಾರೆ. ಜೊತೆಗೆ ದಂಡವನ್ನು ಹಾಕುತ್ತಾರೆ ಎಂದು ಅಬಕಾರಿ ಸಚಿವ ನಾಗೇಶ್ ಹೇಳಿದ್ದಾರೆ
ಅಬಕಾರಿ ಇಲಾಖೆಯು ಬೆಂಗಳೂರಿನಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲು ಮುಂದಾಗಿದೆ. ಇಲಾಖೆಯ ಜಂಟಿ ಆಯುಕ್ತ ನಾಗೇಶ್ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಪಥಸಂಚಲನೆ ನಡೆಯಲಿದೆ. ಈ ಮೂಲಕ ಅಕ್ರಮ ಮದ್ಯ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗುತ್ತದೆ. ಒಂದು ವೇಳೆ ಲಾಕ್‍ಡೌನ್ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಅಬಕಾರಿ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು.
ಅಕ್ರಮವಾಗಿ ಮದ್ಯ ಮಾರಾಟ, ಸಾಗಾಣಿಕೆ ಮಾಡುತ್ತಿದ್ದ ಸಂಬಂಧ ಇದುವರೆಗೆ 22 ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ 14 ಜನ ಆರೋಪಿಗಳನ್ನು ಬಂಧಸಿದ್ದು, 2 ವಾಹನ 2,085 ಲೀ ಮದ್ಯ, 1653 ಲೀ ಬಿಯರ್, 40 ಲೀ. ಸೇಂದಿ ಜಪ್ತಿ ಮಾಡಲಾಗಿದೆ. ನಿಯಮ ಉಲ್ಲಂಘಿಸಿ ಅಕ್ರಮ ಮದ್ಯ ಮಾರಾಟ ಹಿನ್ನೆಲೆ 6 ಅಬಕಾರಿ ಸನ್ನದುಗಳು ರದ್ದುಗೊಳಿಸಲಾಗಿದೆ ಎಂದು ಅಬಕಾರಿ ಇಲಾಖೆಯ ಜಂಟಿ ಆಯುಕ್ತ ನಾಗೇಶ್ ತಿಳಿಸಿದ್ದಾರೆ.