ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿರುವ ನಿಯಂತ್ರಣ ರೇಖೆಯ ಕೆಜಿ ವಲಯದ ಮೂಲಕ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದಾಗ, ಲಷ್ಕರ್-ಎ-ತೈಬಾದ ಉನ್ನತ ಕಮಾಂಡರ್ ಸೇರಿದಂತೆ ನಾಲ್ವರು ಪಾಕಿಸ್ತಾನಿ ಉಗ್ರರು ನೆಲಬಾಂಬ್ ಸ್ಫೋಟದಲ್ಲಿ ಹತರಾಗಿದ್ದಾರೆ.
ಪೂಂಚ್ ಜಿಲ್ಲೆಯ ಕೃಷ್ಣಾ ಘಾಟಿ ವಲಯದಲ್ಲಿರುವ ನಿಯಂತ್ರಣ ರೇಖೆಯ ಸಮೀಪದ ಗ್ರಾಮವೊಂದು, ಸೋಮವಾರ ಸುಧಾರಿತ ಸ್ಫೋಟಕ ಸಾಧನವೊಂದರಿಂದ ಸಂಭವಿಸಿದ ಪ್ರಬಲ ಸ್ಫೋಟದಿಂದಾಗಿ ನಡುಗಿತು.
ಈ ಭಯೋತ್ಪಾದಕರನ್ನು ಪೂಂಚ್ ಜಿಲ್ಲೆಯ (ಪಿಒಜೆಕೆ) ಹಜಿರಾ ತಹಸಿಲ್ನ ಮಂಡ್ಲಾ ಮತ್ತು ಮದರ್ಪುರದ ನಿವಾಸಿಗಳೆಂದು ಗುರುತಿಸಲಾಗಿದ್ದು, ಅವರನ್ನು ಮುಹಮ್ಮದ್ ಇಶ್ತಿಯಾಕ್, ಮುಹಮ್ಮದ್ ಫೈಜಾನ್ (ಪ್ರಮುಖ ಎಲ್ಇಟಿ ಕಮಾಂಡರ್), ಮುಹಮ್ಮದ್ ವಕಾಸ್ ಮತ್ತು ಮುಹಮ್ಮದ್ ಅಸಿಮ್ ಎಂದು ಖಚಿತಪಡಿಸಲಾಗಿದೆ.
ನಿಯಂತ್ರಣ ರೇಖೆಯ ಪಾಕಿಸ್ತಾನದ ಕಡೆಯಲ್ಲಿದ್ದ ಜನರ ಗುಂಪೊಂದು ಭಾರತದೊಳಗೆ ನುಸುಳಲು ಯತ್ನಿಸಿದಾಗ, ರೇಖೆಯ ಸಮೀಪವಿರುವ ಸತ್ವಾಲ್-ನಾಕಿ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸತ್ವಾಲ್-ನಾಕಿಯನ್ನು ಸಾಂಪ್ರದಾಯಿಕ ಒಳನುಸುಳುವಿಕೆಯ ಮಾರ್ಗವೆಂದು ಪರಿಗಣಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಭಯೋತ್ಪಾದಕರು ಈ ಮಾರ್ಗದ ಮೂಲಕ ಗಡಿಯ ಭಾರತೀಯ ಭಾಗಕ್ಕೆ ನುಸುಳಲು ಪ್ರಯತ್ನಿಸಿದ್ದಾರೆ. ಹಿಂದೆಯೂ ಇದೇ ಪ್ರದೇಶದಲ್ಲಿ ಪಾಕಿಸ್ತಾನದ ‘ಬ್ಯಾಟ್’ (BAT) ತಂಡದ ಆರು-ಏಳು ಸದಸ್ಯರು ಇದೇ ರೀತಿಯಲ್ಲಿ ಹತರಾಗಿದ್ದರು.
ಸ್ಫೋಟದ ನಂತರ, ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ಭದ್ರತೆಗೆ ಸಂಭವನೀಯ ಯಾವುದೇ ರೀತಿಯ ಧಕ್ಕೆಯನ್ನು ತಡೆಯಲು ಭದ್ರತಾ ಪಡೆಗಳು ಆ ವಲಯದಾದ್ಯಂತ ಎಚ್ಚರಿಕೆ ಸಂದೇಶವನ್ನು ರವಾನಿಸಿವೆ. ನಿಯಂತ್ರಣ ರೇಖೆಯ (LoC) ಉದ್ದಕ್ಕೂ ನಿಗಾವನ್ನು ತೀವ್ರಗೊಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Laxmi News 24×7