Breaking News

ಯಾವುದೇ ದೂರದೃಷ್ಟಿ ಇಲ್ಲದ ನೀರಸ ಆಯವ್ಯಯ ಪತ್ರ ಇದು- ಬಿವೈವಿ

Spread the love

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಬಜೆಟ್ ಮೂಲಕ ರಾಜ್ಯದ ಜನತೆಗೆ ನಿರಾಶೆ ಉಂಟು ಮಾಡಿದ್ದಾರೆ. ಯಾವುದೇ ದೂರದೃಷ್ಟಿ ಇಲ್ಲದ ನೀರಸ ಆಯವ್ಯಯ ಪತ್ರ ಇದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಒಬ್ಬ ಅನುಭವಿ ಮುಖ್ಯಮಂತ್ರಿಗಳಿದ್ದು, 17ನೇ ಬಜೆಟ್ ಮಂಡಿಸುವ ಸುವರ್ಣಾವಕಾಶ ಅವರಿಗೆ ಸಿಕ್ಕಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀರಿನಲ್ಲಿ ಹೋಮ ಮಾಡುವ ಕೆಲಸವನ್ನು ಮಾಡಿದ್ದಾರೆ. ಯಾವುದೇ ದೂರದೃಷ್ಟಿ ಇಲ್ಲದ ನೀರಸ ಬಜೆಟ್ ಇದು. ಮುಖ್ಯಮಂತ್ರಿಯವರು ಬಜೆಟ್ ಓದುವಾಗ ನಾನು ಆಡಳಿತ ಪಕ್ಷದ ಶಾಸಕರನ್ನು ಗಮನಿಸುತ್ತಿದ್ದೆ. ಯಾವುದೇ ಶಾಸಕರಲ್ಲಿ ಈ ಬಜೆಟ್ ಬಗ್ಗೆ ಆಸಕ್ತಿ ಇಲ್ಲದಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು ಎಂದು ನುಡಿದಿದ್ದಾರೆ. 

ಮುಖ್ಯಮಂತ್ರಿಗಳು ಬಜೆಟ್ ಓದಲು ಆರಂಭಿಸಿದಾಗ ಅದನ್ನು ಕೇಳುತ್ತಿದ್ದರೆ ಯಾರೋ ಸಾಹಿತಿಗಳು ಬರೆದುಕೊಟ್ಟಂತಿತ್ತು. ಕೇಳುವುದಕ್ಕೆ ತುಂಬ ಚೆನ್ನಾಗಿತ್ತು. ಓದಲೂ ಚೆನ್ನಾಗಿ ಅನಿಸಿರಬಹುದು. ಆದರೆ, ರಾಜ್ಯದ ಜನತೆಗೆ ಯಾವುದೇ ಪ್ರಯೋಜನ ಆಗಿಲ್ಲ. 17ನೇ ಬಜೆಟ್ ಮೂಲಕ ನಾಡಿನ ಜನತೆಗೆ ಚೊಂಬನ್ನು ನೀಡಿದ್ದಾರೆ. ಕಳೆದ 3 ಬಜೆಟ್ ಅನ್ನು ನೋಡಿದರೆ, ಹಿಂದಿನ ಬಜೆಟ್‌ನಲ್ಲಿ 1.16 ಲಕ್ಷ ಕೋಟಿ ರೂ. ಸಾಲ ಮಾಡಿದ್ದರು. ಈ ಬಾರಿ 2025-26ನೇ ಸಾಲಿಗೆ 1.32 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಕಳೆದ 3 ವರ್ಷಗಳಲ್ಲಿ 4.39 ಲಕ್ಷ ಕೋಟಿ ರೂ. ಸಾಲ ಮಾಡಿದ್ದೇ ಸಿದ್ದರಾಮಯ್ಯನವರ ದಾಖಲೆ ಎಂದು ಟೀಕಿಸಿದ್ದಾರೆ.

ಆಡಳಿತ ಪಕ್ಷದ ಶಾಸಕರು ಹಿರಿಯ ಶಾಸಕರ ಹತ್ತಿರ ತೆರಳಿ ಮುಖ್ಯಮಂತ್ರಿಗಳು ಪಂಗನಾಮ ಹಾಕಿದ್ದಾರೆ ಎಂದು ತಿಳಿಸಿದ್ದನ್ನು ಗಮನಿಸಿದ್ದಾಗಿ ವಿವರಿಸಿದರು. ಕೇವಲ ಏಳೆಂಟು ಸಚಿವರಷ್ಟೇ ಇದ್ದರು. ಬೇರೆ ಸಚಿವರಿಗೆ, ಆಡಳಿತ ಪಕ್ಷದ ಶಾಸಕರಿಗೆ ಈ ಬಜೆಟ್ ಬಗ್ಗೆ ಆಸಕ್ತಿ ಇರಲಿಲ್ಲ ಎಂದು ಆಕ್ಷೇಪಿಸಿದರು.

ಆದ್ಯತಾ ರಂಗ ಎನಿಸಿದ ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿ ಕಳೆದ ಬಾರಿಗಿಂತ ಅನುದಾನ ಕಡಿಮೆ ಮಾಡಿದ್ದಾರೆ. ಕಳೆದ ಬಾರಿ ಶಿಕ್ಷಣಕ್ಕೆ ಶೇ.12 ನೀಡಿದ್ದು, ಈ ಬಾರಿ ಕಡಿಮೆ ಕೊಟ್ಟಿದ್ದಾರೆ. ಯಾವುದೇ ಆದ್ಯತಾ ರಂಗಕ್ಕೆ ಆದ್ಯತೆ ನೀಡಿಲ್ಲ. ಬಂಡವಾಳ ಹೂಡಿಕೆಗೆ ಆದ್ಯತೆ ಕೊಟ್ಟಿಲ್ಲ. ಅಭಿವೃದ್ಧಿ ದೃಷ್ಟಿ ಇಟ್ಟುಕೊಂಡು ಈ ಬಜೆಟ್ ಮಂಡಿಸಿಲ್ಲ. ಇಂತಹ ಬಜೆಟ್ ಮಂಡಿಸಿಯಾರೆಂದು ನಾವ್ಯಾರೂ ನಿರೀಕ್ಷೆ ಮಾಡಿರಲಿಲ್ಲ. ಮುಖ್ಯಮಂತ್ರಿಗಳು ರೈತರ ಬಗ್ಗೆಯೂ ಯಾವುದೇ ಕಾಳಜಿ ತೋರಿಲ್ಲ. ಯುವಜನತೆಗೆ ಆದ್ಯತೆ ಕೊಡುತ್ತಾರೆ. ಉದ್ಯೋಗ ಅವಕಾಶಕ್ಕೆ ಪೂರಕ ಬಜೆಟ್ ಕೊಡುವ ನಿರೀಕ್ಷೆ ಇತ್ತು. ಅದಕ್ಕೆ ಅವಕಾಶ ನೀಡಿಲ್ಲ. ತಮ್ಮ ಪಂಚ ಗ್ಯಾರಂಟಿಗೆ ಹಣ ಕ್ರೋಡೀಕರಿಸಲು ಸಾಧ್ಯ ಆಗದೇ ಪದೇ ಪದೇ ಅಬಕಾರಿ ಇಲಾಖೆ ಮೇಲೆ ಅವಲಂಬಿತರಾಗಿದ್ದಾರೆ ಎಂದು ದೂರಿದರು.

ಕುಡುಕರ ರಾಜ್ಯವಾಗಿ ಮಾಡಲು ಹೊರಟಿದ್ದಾರೆ:
ಈ ಬಾರಿಯೂ 45 ಸಾವಿರ ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳು ಅಬಕಾರಿ ಇಲಾಖೆಯಿಂದ ನಿರೀಕ್ಷೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ರಾಜ್ಯವನ್ನು ಕುಡುಕರ ರಾಜ್ಯವಾಗಿ ಮಾಡಲು ಹೊರಟಿದ್ದಾರೆ. ಆರೋಗ್ಯ ಇಲಾಖೆ, ನೀರಾವರಿ ಯೋಜನೆಗಳ ಕಡೆ ಗಮನ ಕೊಟ್ಟಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿಗೂ ಕಿಂಚಿತ್ತು ಕಾಳಜಿ ತೋರಿಸಿಲ್ಲ. ಮುಖ್ಯಮಂತ್ರಿಗಳಿಗೆ ಜನ್ಮ ಕೊಟ್ಟ ಮೈಸೂರು ಜಿಲ್ಲೆಗೂ ಯಾವುದೇ ಕೊಡುಗೆ ಕೊಟ್ಟಿಲ್ಲ. ಕರಾವಳಿ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಕರಾವಳಿ ಭಾಗವು ಬಿಜೆಪಿಗೆ ದೊಡ್ಡ ಶಕ್ತಿಯನ್ನು ಕೊಟ್ಟಿದೆ ಎಂಬ ಒಂದೇ ಒಂದು ಕಾರಣಕ್ಕೆ ಅದರ ಉಲ್ಲೇಖವನ್ನೂ ಮಾಡಿಲ್ಲ. ಹಾಗಾಗಿ ಕರಾವಳಿ ಭಾಗ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಸೇರಿ ಇಡೀ ಕರ್ನಾಟಕದ ಅಭಿವೃದ್ಧಿಯ ದೃಷ್ಟಿಕೋನ ಇಲ್ಲದ ಬಜೆಟ್ ಇದಾಗಿದೆ ಎಂದು ತಿಳಿಸಿದರು.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ