ನನಗೆ ಸಚಿವ ಸ್ಥಾನಕ್ಕಿಂತ ಕಾಗವಾಡ ಮತಕ್ಷೇತ್ರದ ಜನರ ಜೀವನಾಡಿಯಾಗಿರುವ 1300 ಕೋಟಿ ರೂ. ವೆಚ್ಚದ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ನನಗೆ ಮುಖ್ಯ ಎಂದು ಶಾಸಕ ಶ್ರೀಮಂತ ಪಾಟೀಲ ಸ್ಪಷ್ಟಪಡಿಸಿದರು.
ಶುಕ್ರವಾರ ಕಾಗವಾಡ ತಾಲೂಕಿನ ಕಲೂತಿ ಗ್ರಾಮದಲ್ಲಿ 5 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಶ್ರೀಮಂತ ಪಾಟೀಲ್ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಮಂತ ಪಾಟೀಲ್ ಬಸವೇಶ್ವರ ಏತ ನೀರಾವರಿ ಯೋಜನೆ ಸುಮಾರು 1300 ಕೋಟಿ ರೂ. ವೆಚ್ಚದ ಕಾಮಗಾರಿಯಾಗಿದೆ. ಶೇ.60ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆ ಕಾಮಗಾರಿ ವಿಳಂಬವಾಗಿದೆ. ಈಗ ಕೋವಿಡ್ ಕಡಿಮೆ ಆಗಿರುವ ಹಿನ್ನೆಲೆ ಮತ್ತೆ ಕಾಮಗಾರಿ ಭರದಿಂದ ಸಾಗಿದೆ ಎಂದರು.
ಇನ್ನು ನೀರಾವರಿ ಯೋಜನೆಗೆ ಯಾವುದೇ ರೀತಿ ಅನುದಾನ ಕೊರತೆಯಾಗಬಾರದು ಎಂದು ನಾನು ಸಿಎಂ ಬೊಮ್ಮಾಯಿ, ನೀರಾವರಿ ಸಚಿವ ಗೋವಿಂದ ಕಾರಜೋಳ ಇವರೊಂದಿಗೆ ಚರ್ಚಿಸಿದ್ದೇನೆ. ನನಗೆ ಸಚಿವ ಸ್ಥಾನ ಕೊಡದಿದ್ದರು ಪರವಾಗಿಲ್ಲ. ಆದರೆ ಈ ಭಾಗದ ರೈತರ ಜೀವನಾಡಿಯಾಗಿರುವ ಬಸವೇಶ್ವರ ಏತ ನೀರಾವರಿ ಯೋಜನೆಗೆ ಯಾವುದೇ ಅನುದಾನ ಕೊರತೆಯಾಗಬಾರದು ಎಂದು ಮನವಿ ಮಾಡಿಕೊಂಡಿದ್ದೇನೆ, ನಾಳೆ ನಡೆಯಲಿರುವ ಬಜಟ್‍ನಲ್ಲಿ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ ಎಂದು ಶ್ರೀಮಂತ ಪಾಟೀಲ್ ತಿಳಿಸಿದರು.