Breaking News

ಹಿಂದುಳಿದ ವರ್ಗಗಳ 2ಎ ಪಟ್ಟಿಗೆ ಸೇರಿಸುವಂತೆ 24 ದಾಖಲೆ ಸಲ್ಲಿಸಿದ ಪಂಚಮಸಾಲಿ ನಿಯೋಗ

Spread the love

ಬೆಂಗಳೂರು: ಪಂಚಮಸಾಲಿ ಸಮು ದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ 2-ಎ ಪಟ್ಟಿಗೆ ಸೇರಿಸುವ ಬೇಡಿಕೆ ಕುರಿತು ಅಧ್ಯಯನ ನಡೆಸುತ್ತಿರುವ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಬಿ.ಅಡಿ ನೇತೃತ್ವದ ಸಮಿತಿ ಎದುರು ಸೋಮವಾರ ಹಾಜರಾದ ಹರಿಹರ ಪಂಚಮಸಾಲಿ ಪೀಠದ ವಚನಾ ನಂದ ಸ್ವಾಮೀಜಿ ನೇತೃತ್ವದ ನಿಯೋ‌ಗ, ತಮ್ಮ ಬೇಡಿಕೆಗೆ ಪೂರಕವಾಗಿ 24 ದಾಖಲೆಗಳನ್ನು ಸಲ್ಲಿಸಿತು.

 

ಪಂಚಮಸಾಲಿ ಮಠಾಧೀಶರು ಮತ್ತು ಮುಖಂಡರ ನಿಯೋಗದ ಪರವಾಗಿ ವಾದ ಮಂಡಿಸಿದ ವಕೀಲ ಬಿ.ಎಸ್‌.ಪಾಟೀಲ, ‘1871 ರಲ್ಲೇ ಪಂಚಮಸಾಲಿ ಲಿಂಗಾಯತರನ್ನು ಶೂದ್ರರು ಎಂದು ಗುರುತಿಸಲಾಗಿತ್ತು. 1919ರ ಮಿಲ್ಲರ್ಸ್‌ ಆಯೋಗದ ವರದಿಯಲ್ಲೂ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಹೆಸರಿಸಲಾಗಿತ್ತು. ಈ ಎಲ್ಲವನ್ನೂ ಪರಿಗಣಿಸಿ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2-ಎ ಪಟ್ಟಿಗೆ ಸೇರಿಸಿ, ಮೀಸಲಾತಿ ನೀಡಬೇಕು’ ಎಂದು ಮನವಿ ಮಾಡಿದರು.

ಚಿನ್ನಪ್ಪರೆಡ್ಡಿ ಮತ್ತು ಎಲ್‌.ಜಿ.ಹಾವನೂರು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗಗಳು ಪಂಚಮಸಾಲಿ ಲಿಂಗಾಯತರ ಕುರಿತು ಸರಿಯಾದ ಸಮೀಕ್ಷೆ ನಡೆಸಿಲ್ಲ. ಈ ಕಾರಣದಿಂದ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಮೀಸಲಾತಿ ದೊರಕಿಲ್ಲ. ಈ ಎಲ್ಲ ಲೋಪಗಳನ್ನು ಸರಿಪಡಿಸಿ ಪಂಚಮಸಾಲಿಗಳಿಗೆ 2-ಎ ಪ್ರವರ್ಗದಡಿ ಮೀಸಲಾತಿ ಕಲ್ಪಿಸಬೇಕು ಎಂದರು.

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಸಂಬಂಧ 1879 ರಿಂದಲೂ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಪ್ರಕಟವಾದ ವಿವಿಧ ತೀರ್ಪುಗಳು, ಇತ್ತೀಚಿನ ವರ್ಷಗಳಲ್ಲಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪುಗಳು ಸೇರಿದಂತೆ 24 ದಾಖಲೆಗಳನ್ನು ಸಮಿತಿಗೆ ಸಲ್ಲಿಸಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ವಚನಾನಂದ ಸ್ವಾಮೀಜಿ, ‘ಕೃಷಿಯೇ ಪಂಚಮಸಾಲಿ ಲಿಂಗಾಯಿತ ಸಮುದಾಯದ ಮೂಲ ಕಸುಬಾಗಿತ್ತು. ಆದರೆ ಈವರೆಗೆ ಸರಿಯಾದ ಮೀಸಲಾತಿ ದೊರಕಿಲ್ಲ. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಈ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ 2-ಎ ಅಡಿಯಲ್ಲಿ ಮೀಸಲಾತಿ ನೀಡಬೇಕು ಎಂಬುದು ನಮ್ಮ ಬೇಡಿಕೆ. ಅದಕ್ಕೆ ಪೂರಕವಾದ ಮಹತ್ವದ ದಾಖಲೆಗಳನ್ನು ಸಮಿತಿಗೆ ಸಲ್ಲಿಸಿದ್ದೇವೆ’ ಎಂದರು.

ಪ್ರವರ್ಗ 2-ಎ ಅಡಿಯಲ್ಲಿ ಮೀಸಲಾತಿ ಪಡೆಯಲು ಪಂಚಮಸಾಲಿ ಲಿಂಗಾಯತ ಸಮುದಾಯ ಎಲ್ಲ ರೀತಿಯಿಂದಲೂ ಅರ್ಹವಾಗಿದೆ. ತಮ್ಮ ಬೇಡಿಕೆಯನ್ನು ಸಮಿತಿ ಪುರಸ್ಕರಿಸುವ ವಿಶ್ವಾಸವಿದೆ ಎಂದು ಹೇಳಿದರು.

ಬಬಲೇಶ್ವರದ ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಮನ ಗೂಳಿ ಹಿರೇಮಠದ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ, ಪಂಚಮಸಾಲಿ ಮುಖಂಡರಾದ ಬಸವರಾಜ ದಿಂಡೂರ, ಸೋಮನಗೌಡ ಪಾಟೀಲ, ಚಂದ್ರಶೇಖರ ಪೂಜಾರ, ವಸಂತಾ ಹುಲ್ಲತ್ತಿ ನಿಯೋಗದಲ್ಲಿದ್ದರು.


Spread the love

About Laxminews 24x7

Check Also

ಕೋರ್ಟ್‌, ಏರ್‌ಪೋರ್ಟ್‌ಗೆ 1,100 ಹುಸಿ ಬಾಂಬ್ ಬೆದರಿಕೆ – ಮೈಸೂರಲ್ಲಿ ಆರೋಪಿ ಅರೆಸ್ಟ್‌

Spread the loveಮೈಸೂರು: ದೇಶದ ನಾನಾ ಭಾಗಗಳಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಇಮೇಲ್ ರವಾನಿಸುತ್ತಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು  ಮೈಸೂರಿನಲ್ಲಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ