ಹುಬ್ಬಳ್ಳಿ: ರಸ್ತೆ ಅಪಘಾತದಲ್ಲಿ ನನ್ನ ವಾಹನ ಜಖಂಗೊಂಡಿರುವುದಕ್ಕೆ ಬೇಸರವಿಲ್ಲ. ಈ ಅಪಘಾತದಲ್ಲಿ ಇಬ್ಬರ ಪ್ರಾಣ ಹೋಗಿರುವುದು ತುಂಬಾ ನೋವಾಗುತ್ತಿದೆ ಎಂದು ಮಾಜಿ ಸಚಿವೆ ಹಾಗೂ ನಟಿ ಉಮಾಶ್ರೀ ತಮ್ಮ ಕಾರು ಅಪಘಾತದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ನಿನ್ನೆ ರಾತ್ರಿ ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಬಳಿ ನಡೆದ ಕಾರುಗಳ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಾಯಗೊಂಡಿದ್ದರು. ರಸ್ತೆ ಅಪಘಾತದಲ್ಲಿ ಶೋಭಾ ಕಟ್ಟಿ ಹಾಗೂ ಚಾಲಕ ಸಂದೀಪ್ ವಿಭೂತಿಮಠ ಸಾವಿಗೀಡಾಗಿದ್ದಾರೆ. ಜೊತೆಗೆ ಡಾಕ್ಟರ್ ಸ್ಮಿತಾ ಕಟ್ಟಿ, ಉಮಾಶ್ರೀಯವರ ಕಾರು ಚಾಲಕ ಶಿವಕುಮಾರ್ ಬಿಡನಾಳ ಸೇರಿದಂತೆ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಅಪಘಾತವಾದ ವಿಷಯ ತಿಳಿಯುತ್ತಿದ್ದಂತೆ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮಾಜಿ ಸಚಿವೆ ಉಮಾಶ್ರೀ, ಪೊಲೀಸರಿಂದ ಮಾಹಿತಿ ಸಂಗ್ರಹಿಸಿದರು. ಈ ವೇಳೆ ಮಾತನಾಡಿದ ಉಮಾಶ್ರೀ, ಕೊಪ್ಪಳ ಮೂಲದ ಚಾಲಕ ಇಲ್ಲಿಗೆ ಬಂದಿದ್ದು ಯಾಕೆ ಎಂಬುದು ಗೊತ್ತಿಲ್ಲ. ಆತನನ್ನ ನನ್ನ ಬಳಿ ಕೆಲಸ ಮಾಡಲು ಈ ಹಿಂದೆ ಕೊಪ್ಪಳದ ಕಾರ್ಯಕರ್ತರೇ ಪರಿಚಯಿಸಿ ಕಳಿಸಿದ್ದರು. ಈ ಘಟನೆಯಿಂದ ನಾನು ನೊಂದಿದ್ದೇನೆ ಎಂದರು.

ಅಪಘಾತದ ಬಗ್ಗೆ ಗ್ರಾಮೀಣ ಠಾಣೆಯ ಇನ್ಸ್ ಪೆಕ್ಟರ್ ರಮೇಶ್ ಗೋಕಾಕ್ ಅವರಿಂದ ಮಾಹಿತಿ ಪಡೆದಿರುವ ಉಮಾಶ್ರೀ ಗಾಯಾಳುಗಳ ಆರೋಗ್ಯ ವಿಚಾರಿಸಿ ಅಪಘಾತದ ಬಗ್ಗೆ ನೋವು ವ್ಯಕ್ತಪಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
Laxmi News 24×7