ತಿರುವನಂತಪುರಂ: 2024 ರ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಕೇರಳದ ಮಾಜಿ ಮುಖ್ಯಮಂತ್ರಿ ಕೆ ಕರುಣಾಕರನ್ ಅವರ ಪುತ್ರಿ ಪದ್ಮಜಾ ವೇಣುಗೋಪಾಲ್ , ಕೇವಲ ಎರಡೂವರೆ ವರ್ಷಗಳಲ್ಲೇ ಬಿಜೆಪಿಗೆ ಗುಡ್ಬೈ ಹೇಳಿದ್ದಾರೆ.
ಗುರುವಾರ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಮತ್ತು ಪಕ್ಷದ ರಾಷ್ಟ್ರೀಯ ನಾಯಕತ್ವಕ್ಕೆ ಇ-ಮೇಲ್ ಮೂಲಕ ತಮ್ಮ ರಾಜೀನಾಮೆ ಪತ್ರವನ್ನು ಕಳುಹಿಸಿರುವುದಾಗಿ ಪದ್ಮಜಾ ತಿಳಿಸಿದ್ದಾರೆ.
ನನ್ನ ತಪ್ಪನ್ನು ಈಗ ಸರಿಪಡಿಸಿಕೊಳ್ಳುತ್ತಿದ್ದೇನೆ
ರಾಜೀನಾಮೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪದ್ಮಜಾ ವೇಣುಗೋಪಾಲ್, ಬಿಜೆಪಿ ಸೇರುವ ಮುನ್ನ ಆ ಪಕ್ಷದ ಸಿದ್ಧಾಂತವನ್ನು ಸರಿಯಾಗಿ ಅಧ್ಯಯನ ಮಾಡದೇ ಇರುವುದು ನಾನು ಮಾಡಿದ ದೊಡ್ಡ ತಪ್ಪು. ಈಗ ಆ ತಪ್ಪನ್ನು ಸರಿಪಡಿಸಿಕೊಳ್ಳುತ್ತಿದ್ದೇನೆ ಎಂದು ನೇರವಾಗಿ ಹೇಳಿದ್ದಾರೆ.
2024ರಲ್ಲಿ ಪದ್ಮಜಾ ಬಿಜೆಪಿ ಸೇರಿದಾಗ ಅವರ ಸಹೋದರ, ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕೇರಳದ ಆರೋಗ್ಯ ಸಚಿವ ಕೆ. ಮುರಳೀಧರನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಈಗ ಬಿಜೆಪಿ ತೊರೆಯುವ ನಿರ್ಧಾರವನ್ನು ಪದ್ಮಜಾ ಮೊದಲು ತಮ್ಮ ಅಣ್ಣನ ಜೊತೆಯೇ ಚರ್ಚಿಸಿದ್ದಾರೆ. ನನ್ನ ಸಹೋದರ ಮತ್ತೆ ನನ್ನ ಜೀವನದಲ್ಲಿ ಬಂದಿರುವುದು ಮತ್ತು ನಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯ ಬಗೆಹರಿದಿರುವುದು ನನಗೆ ತುಂಬಾ ಖುಷಿ ತಂದಿದೆ ಎಂದು ಪದ್ಮಜಾ ಹೇಳಿದ್ದಾರೆ.
ಮತ್ತೆ ಕಾಂಗ್ರೆಸ್ನತ್ತ ಪದ್ಮಜಾ?
ಬಿಜೆಪಿ ತೊರೆದಿರುವ ಪದ್ಮಜಾ ಮತ್ತೆ ತಮ್ಮ ಹಳೇಯ ಪಕ್ಷವಾದ ಕಾಂಗ್ರೆಸ್ಗೆ ಮರಳಲಿದ್ದಾರೆ ಎಂಬ ಮಾತುಗಳು ಕೇರಳ ರಾಜಕೀಯದಲ್ಲಿ ಜೋರಾಗಿ ಕೇಳಿಬರುತ್ತಿವೆ. ಆದರೆ, ಕಾಂಗ್ರೆಸ್ ಸೇರುವ ಬಗ್ಗೆ ನಾನು ಇನ್ನೂ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪದ್ಮಜಾ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಯುಡಿಎಫ್ ಸರ್ಕಾರ ಮತ್ತು ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರ ಆಡಳಿತದ ಬಗ್ಗೆ ಪದ್ಮಜಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇತ್ತ ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಕೂಡ ಪದ್ಮಜಾ ಅವರ ನಡೆಗೆ ಸ್ವಾಗತ ಕೋರಿದ್ದಾರೆ. ನಮ್ಮ ನಾಯಕನ ಮಗಳು ಮತ್ತೆ ಕಾಂಗ್ರೆಸ್ಗೆ ಬರುವುದಾದರೆ ಪೂರ್ಣ ಹೃದಯದಿಂದ ಸ್ವಾಗತಿಸುತ್ತೇವೆ. ಬಿಜೆಪಿ ತೊರೆದಿರುವುದು ಒಳ್ಳೆಯ ನಿರ್ಧಾರ ಎಂದು ಹೇಳಿದ್ದಾರೆ.
ಬಿಜೆಪಿಯಲ್ಲಿ ಏನಾಗಿತ್ತು?
ಮಾರ್ಚ್ 7, 2024ರಂದು ದೆಹಲಿಯಲ್ಲಿ ಪ್ರಕಾಶ್ ಜಾವಡೇಕರ್ ಸಮ್ಮುಖದಲ್ಲಿ ಪದ್ಮಜಾ ಬಿಜೆಪಿ ಸೇರಿದ್ದರು. ನಂತರ 2025ರಲ್ಲಿ ಪಕ್ಷದ ರಾಷ್ಟ್ರೀಯ ಮಂಡಳಿಗೆ ನೇಮಕಗೊಂಡಿದ್ದರೂ, ಅವರಿಗೆ ಯಾವುದೇ ದೊಡ್ಡ ಜವಾಬ್ದಾರಿ ಸಿಕ್ಕಿರಲಿಲ್ಲ. ಜೊತೆಗೆ 2026ರ ವಿಧಾನಸಭಾ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. ಆದರೆ, ಹುದ್ದೆ ಸಿಗಲಿಲ್ಲ ಎಂಬ ಕಾರಣಕ್ಕೆ ನಾನು ರಾಜೀನಾಮೆ ನೀಡಿಲ್ಲ, ಇದು ನನ್ನ ವೈಯಕ್ತಿಕ ಮತ್ತು ಸೈದ್ಧಾಂತಿಕ ನಿರ್ಧಾರ ಎಂದು ಪದ್ಮಜಾ ಸ್ಪಷ್ಟನೆ ನೀಡಿದ್ದಾರೆ.
Laxmi News 24×7