ರಾಮನಗರ: ಶಾಲೆಯಲ್ಲಿ ಗಲಾಟೆ ಮಾಡಿದ್ದಕ್ಕೆ ಶಿಕ್ಷಕರು ಬೈದು ಪೋಷಕರಿಗೆ ವಿಷಯ ತಿಳಿಸುತ್ತೇವೆ ಎಂದಿದ್ದಕ್ಕೆ ಹೆದರಿದ ಹತ್ತನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು, ರಾತ್ರೋರಾತ್ರಿ ವಸತಿ ಶಾಲೆಯ ಕಾಂಪೌಂಡ್ ಹಾರಿ ಪರಾರಿಯಾಗಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ಇದೀಗ ಮಕ್ಕಳ ಪತ್ತೆಗಾಗಿ ವಸತಿ ಶಾಲೆ ಪ್ರಾಂಶುಪಾಲರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೋಷಕರು ಆತಂಕಕ್ಕೀಡಾಗಿದ್ದಾರೆ.
ರಾಮನಗರ ಟೌನ್ನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ ನಾಲ್ವರು ವಿದ್ಯಾರ್ಥಿಗಳು ನಿನ್ನೆ ರಾತ್ರಿ ಶಾಲೆಯಿಂದ ಪರಾರಿ ಆಗಿದ್ದಾರೆ.
ಈ ಪೈಕಿ ಇಬ್ಬರು ರಾಮನಗರ ಮೂಲದವರಾಗಿದ್ದರೆ, ಮತ್ತಿಬ್ಬರು ಬೆಂಗಳೂರು ಮೂಲದ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ವಿದ್ಯಾರ್ಥಿಗಳ ಪತ್ತೆಗಾಗಿ ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಾಂಶುಪಾಲರು ದೂರು ದಾಖಲಿಸಿದ್ದು, ಪೊಲೀಸರು ಮಕ್ಕಳ ಹುಡುಕಾಟ ಆರಂಭಿಸಿದ್ದಾರೆ.
ನಿನ್ನೆ ನಾಪತ್ತೆಯಾದ ಈ ನಾಲ್ವರು ವಿದ್ಯಾರ್ಥಿಗಳು ಶಾಲೆಯಲ್ಲಿ ಇತರ ಸಹಪಾಠಿಗಳೊಂದಿಗೆ ಗಲಾಟೆ ಮಾಡಿಕೊಂಡಿದ್ದರು. ಈ ವಿಷಯ ತಿಳಿದ ಶಾಲಾ ಶಿಕ್ಷಕರು, ನಾಲ್ವರನ್ನೂ ಕರೆದು ಬೈದು ಬುದ್ದಿವಾದ ಹೇಳಿದ್ದರು. ಅಷ್ಟೇ ಅಲ್ಲ, ಶಾಲೆಗೆ ಪೋಷಕರನ್ನು ಕರೆಸಿ ಈ ಗಲಾಟೆಯ ಬಗ್ಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ತಾವು ಮಾಡಿದ ಗಲಾಟೆ ಎಲ್ಲಿ ಪೋಷಕರಿಗೆ ತಿಳಿದುಬಿಡುತ್ತದೆಯೋ ಎಂಬ ಭಯಕ್ಕೆ ವಿದ್ಯಾರ್ಥಿಗಳು ಹಾಸ್ಟೆಲ್ ಬಿಟ್ಟು ಹೋಗಿದ್ದಾರೆ. ನಿನ್ನೆ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಮುಖ್ಯ ಗೇಟ್ ಬಳಿ ಸೆಕ್ಯೂರಿಟಿ ಗಾರ್ಡ್ ಇದ್ದ ಕಾರಣ, ಹಾಸ್ಟೆಲ್ನ ಕಾಂಪೌಂಡ್ ಗೋಡೆ ಹಾರಿ ನಾಲ್ವರೂ ಪರಾರಿಯಾಗಿದ್ದಾರೆ.
ನಿನ್ನೆ ರಾತ್ರಿ ಹೋದ ವಿದ್ಯಾರ್ಥಿಗಳು ಇಂದು ಸಂಜೆಯಾದರೂ ವಸತಿ ಶಾಲೆಗೆ ವಾಪಸ್ ಬಂದಿಲ್ಲ. ಇದರಿಂದ ಆತಂಕಗೊಂಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲೆ ರೂಪ, ಇದೀಗ ಐಜೂರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಕಾಣೆಯಾಗಿರುವ ನಾಲ್ವರು ವಿದ್ಯಾರ್ಥಿಗಳನ್ನು ಪತ್ತೆಹಚ್ಚಿ ಕೊಡುವಂತೆ ಪ್ರಾಂಶುಪಾಲರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಐಜೂರು ಠಾಣೆ ಪೊಲೀಸರು ಕಾಣೆಯಾದ ವಿದ್ಯಾರ್ಥಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈಗಾಗಲೇ ಹಲವೆಡೆ ಸಿಸಿಟಿವಿ ಪರಿಶೀಲನೆ ಮಾಡ್ತಿರೋ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
Laxmi News 24×7