ಧಾರವಾಡ: ಸಾಮಾನ್ಯವಾಗಿ ದೇವರ ಮೂರ್ತಿಗೆ ಬೆಣ್ಣೆ ಲೇಪನ ಮಾಡಿದರೆ ಕೆಲವೇ ಗಂಟೆಗಳಲ್ಲಿ ಕರಗುತ್ತದೆ. ಆದರೆ, ಧಾರವಾಡದ (Dharwad) ಕೃಷಿ ನಗರದ ವೀರ ಆಂಜನೇಯ ದೇವಸ್ಥಾನದಲ್ಲಿ 17 ದಿನಗಳ ಹಿಂದೆ ಲೇಪನ ಮಾಡಿದ್ದ ಬೆಣ್ಣೆ ಇನ್ನೂ ಕರಗದೆ ಹಾಗೆಯೇ ಇದೆ. ಈ ಘಟನೆ ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.
ಕೃಷಿ ನಗರದ ನಿವಾಸಿ ವಿಪಿನ್ ಶೆಟ್ಟಿ ಅವರು ತಮ್ಮ ಮಗನ 12ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ವೀರ ಆಂಜನೇಯನಿಗೆ ಬೆಣ್ಣೆ ಲೇಪನ ಮಾಡಿಸಿ ಪೂಜೆ ಸಲ್ಲಿಸಿದ್ದರು. ಇದಕ್ಕಾಗಿ ಕೆಎಂಎಫ್ನ ಅನ್ಸಾಲ್ಟೆಡ್ ಬೆಣ್ಣೆಯನ್ನು ಬಳಸಲಾಗಿತ್ತು.
ಸುಮಾರು ಐದು ಕೆಜಿಗೂ ಹೆಚ್ಚು ಬೆಣ್ಣೆಯನ್ನು ಮೂರ್ತಿಗೆ ಲೇಪನ ಮಾಡಲು ಸುಮಾರು ನಾಲ್ಕು ಗಂಟೆಗಳ ಸಮಯ ತೆಗೆದುಕೊಳ್ಳಲಾಗಿತ್ತು. ಸಾಮಾನ್ಯವಾಗಿ ಇಂತಹ ಬೆಣ್ಣೆ ಲೇಪನ ಅದೇ ದಿನ ಸಂಜೆ ವೇಳೆಗೆ ಕರಗುತ್ತದೆ. ಆದರೆ, ಈ ಬಾರಿ ಮರುದಿನವೂ ಬೆಣ್ಣೆ ಕರಗದೆ ಹಾಗೆಯೇ ಉಳಿದಿತ್ತು ಎನ್ನಲಾಗಿದೆ.
17 ದಿನಗಳಿಂದ ಬೆಣ್ಣೆಯ ಮೇಲೆ ನಿಗಾ
ದೇವಸ್ಥಾನದ ಅರ್ಚಕರು ಮತ್ತು ಆಡಳಿತ ಮಂಡಳಿಯವರು ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಬೆಣ್ಣೆಯ ಸ್ಥಿತಿಯನ್ನು ಗಮನಿಸುತ್ತಿದ್ದಾರೆ. 17 ದಿನ ಕಳೆದರೂ ಬೆಣ್ಣೆ ಕರಗಿಲ್ಲ ಎಂದು ದೇವಸ್ಥಾನದವರು ತಿಳಿಸಿದ್ದಾರೆ.
ಬೆಣ್ಣೆ ಕರಗಿದ ಬಳಿಕ ಮೂರ್ತಿಯನ್ನು ಮರಳು ಬಳಸಿ ಶುದ್ಧೀಕರಿಸುವ ವ್ಯವಸ್ಥೆ ಮಾಡಲಾಗಿತ್ತು. ಕರಗಿದ ಬೆಣ್ಣೆಯನ್ನು ತುಪ್ಪದ ರೂಪದಲ್ಲಿ ದೀಪಕ್ಕೆ ಬಳಸುವ ಉದ್ದೇಶವೂ ಇತ್ತು. ಆದರೆ, ಬೆಣ್ಣೆ ಕರಗದ ಕಾರಣ ಆ ಕೆಲಸವೂ ನಡೆದಿಲ್ಲ.
ಬೆಣ್ಣೆ ಇಷ್ಟು ದಿನಗಳಾದರೂ ಕರಗದೆ ಉಳಿದಿರುವುದನ್ನು ದೇವಸ್ಥಾನದ ಅಧ್ಯಕ್ಷರು ದೇವರ ಪವಾಡ ಎಂದು ನಂಬಿದ್ದಾರೆ. ಈ ಸುದ್ದಿ ಹರಡುತ್ತಿದ್ದಂತೆ ಆಂಜನೇಯನ ಮೂರ್ತಿಯ ಮೇಲಿರುವ ಬೆಣ್ಣೆಯನ್ನು ನೋಡಲು ಭಕ್ತರು ಮತ್ತು ಸಾರ್ವಜನಿಕರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ.
Laxmi News 24×7