Breaking News

ಬೆಳಗಾವಿಯ ಡಾ. ಸ್ಮಿತಾ ಸುರೇಬಾನ್ಕರ್ ಅವರಿಗೆ ₹1 ಲಕ್ಷ ಮೊತ್ತದ ‘ಇತಿಹಾಸ ಸಾಂಸ್ಕೃತಿಕ ಶ್ರೀ’ ಪ್ರಶಸ್ತಿ

Spread the love

ಬೆಳಗಾವಿ: ಇತಿಹಾಸ ಸಂಶೋಧನೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಯಲ್ಲಿ ಮಹತ್ವದ ಕೊಡುಗೆ ನೀಡಿರುವ ಬೆಳಗಾವಿಯ ಹಿರಿಯ ಸಂಶೋಧಕಿ ಹಾಗೂ ಆರ್.ಪಿ.ಡಿ. ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಸ್ಮಿತಾ ಸುರೇಬಾನ್ಕರ್ ಅವರಿಗೆ ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರತಿಷ್ಠಿತ ‘ಇತಿಹಾಸ ಸಾಂಸ್ಕೃತಿಕ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಅನುಭವ ಮಂಟಪದಲ್ಲಿ ಶುಕ್ರವಾರ ನಡೆದ ಕರ್ನಾಟಕ ಇತಿಹಾಸ ಅಕಾಡೆಮಿಯ 40ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಪುರಾಲೇಖ ತಜ್ಞ ಜೆ.ಎಂ. ನಾಗಯ್ಯ ಹಾಗೂ ಇತಿಹಾಸ ಸಂಶೋಧಕಿ ಡಾ. ಸ್ಮಿತಾ ಸುರೇಬಾನ್ಕರ್ ಅವರಿಗೆ ತಲಾ ₹1 ಲಕ್ಷ ನಗದು ಬಹುಮಾನ ಒಳಗೊಂಡ ‘ಇತಿಹಾಸ ಸಾಂಸ್ಕೃತಿಕ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇತಿಹಾಸ ಸಂಶೋಧನೆ, ಪರಂಪರೆಯ ಸಂರಕ್ಷಣೆ ಹಾಗೂ ಸಾರ್ವಜನಿಕರಲ್ಲಿ ಐತಿಹಾಸಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಇತಿಹಾಸ ಅಕಾಡೆಮಿಯು ಕಳೆದ ಮೂರು ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡುತ್ತಿದೆ. ಈ ಬಾರಿ ಇತಿಹಾಸ, ಸಂಸ್ಕೃತಿ, ಪರಂಪರೆ ಮತ್ತು ವಾಸ್ತುಶಿಲ್ಪ ಕ್ಷೇತ್ರಗಳಲ್ಲಿ ನಮ್ಮ ಬೆಳಗಾವಿ ನಗರದ ನಿವಾಸಿ ಡಾ. ಸ್ಮಿತಾ ಅವರು ನಡೆಸಿರುವ ಅಮೂಲ್ಯ ಸಂಶೋಧನಾ ಕಾರ್ಯವನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು..

ಡಾ. ಸ್ಮಿತಾ ಅವರ ‘Splendours of Belagavi’ ಕೃತಿಯು ಬೆಳಗಾವಿಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ವೈಭವವನ್ನು ಪರಿಚಯಿಸುವ ಮಹತ್ವದ ಪುಸ್ತಕವಾಗಿದೆ. ಅಲ್ಲದೆ, ‘ಬೆಳಗಾವಿ ವಾಸ್ತುಶಿಲ್ಪ ನಿಧಿ’ ಕೃತಿಯಲ್ಲಿ ಜಿಲ್ಲೆಯ ಶಿಲ್ಪಕಲೆ ಹಾಗೂ ವಾಸ್ತುಶಿಲ್ಪ ಪರಂಪರೆಯ ಕುರಿತು ವಿಸ್ತೃತ ಅಧ್ಯಯನವನ್ನು ದಾಖಲಿಸಿದ್ದಾರೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವರ 25ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡಿವೆ.

ಭಾಲ್ಕಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ. ದೇವರಕೊಂಡ ರೆಡ್ಡಿ, ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ರವೀಂದ್ರನಾಥ್, ವಿಶ್ವವಿದ್ಯಾಲಯದ ಕುಲಪತಿ ಡಾ. ಪರಮಶಿವಮೂರ್ತಿ ಹಾಗೂ ಕರ್ನಾಟಕದ ಅರಣ್ಯ ಸಚಿವ ಈಶ್ವರ ಖಂಡ್ರೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಬೆಳಗಾವಿಯ ಇತಿಹಾಸ, ಸಂಸ್ಕೃತಿ ಮತ್ತು ವಾಸ್ತುಶಿಲ್ಪ ಪರಂಪರೆಯನ್ನು ಸಂಶೋಧನೆಯ ಮೂಲಕ ನಾಡಿನಾದ್ಯಂತ ಪರಿಚಯಿಸುತ್ತಿರುವ ಡಾ. ಸ್ಮಿತಾ ಸುರೇಬಾನ್ಕರ್ ಅವರ ಸಾಧನೆಗೆ ಸಂದಿರುವ ಈ ಗೌರವ ಜಿಲ್ಲೆಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವಲಯದಲ್ಲಿ ಸಂತಸ ಮೂಡಿಸಿದೆ.


Spread the love

About Laxminews 24x7

Check Also

ಪುತ್ರಿಯೊಂದಿಗೆ ಸಲುಗೆ ಕೆಲಸಗಾರನ ಹತ್ಯೆಗೈದ ತಂದೆ

Spread the loveಬೆಂಗಳೂರು: ಮನೆಯಲ್ಲಿ ಪುತ್ರಿಯೊಂದಿಗೆ ಸಿಕ್ಕಿಬಿದ್ದ ಕೇರಳ ಮೂಲದ ಕೆಲಸಗಾರನನ್ನು ತಂದೆಯೇ ಕ್ರಿಕೆಟ್ ಬ್ಯಾಟ್ ಹಾಗೂ ಪೈಪ್‌ನಿಂದ ಹಲ್ಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ