Breaking News

ನವೆಂಬರ್‌ನಲ್ಲೇ 99 ಅಡಿಗೆ ಕುಸಿದ ಕೆಆರ್‌ಎಸ್ ನೀರಿನ ಮಟ್ಟ

Spread the love

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ನೀರಿನ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ನವೆಂಬರ್ ಆರಂಭದಲ್ಲೇ 99 ಅಡಿಗೆ ಕುಸಿದಿದ್ದು, ಬೇಸಿಗೆ ಸಮೀಪಿಸುವ ಮುನ್ನವೇ ಜಲಕಂಟಕ ಎದುರಾಗುವ ಆತಂಕ ಸೃಷ್ಟಿಯಾಗಿದೆ.

124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಡ್ಯಾಂನಲ್ಲಿ ಕೇವಲ ಒಂದು ವಾರದ ಅವಧಿಯಲ್ಲೇ ಬರೋಬ್ಬರಿ 5 ಅಡಿ ನೀರು ಖಾಲಿಯಾಗಿದೆ. ಕಳೆದ ವಾರ 104 ಅಡಿಯಷ್ಟಿದ್ದ ನೀರಿನ ಮಟ್ಟ, ಪ್ರಸ್ತುತ 99 ಅಡಿಗೆ ಇಳಿದಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಈವರೆಗೆ ಐದು ಬಾರಿ ನೀರು ಹರಿಸುವಂತೆ ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನಿರಂತರವಾಗಿ ನೀರು ಬಿಡಲಾಗುತ್ತಿದೆ. ಪ್ರಸ್ತುತ ಜಲಾಶಯದಿಂದ ನದಿ ಹಾಗೂ ನಾಲೆಗಳಿಗೆ ಒಟ್ಟು 7,884 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಇದರಲ್ಲಿ 3,000 ಕ್ಯೂಸೆಕ್‌ನಷ್ಟು ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ. ನಿರಂತರ ಹೊರಹರಿವಿನ ಪರಿಣಾಮ ಕಾವೇರಿ ನದಿ ತೀರ ಬರಿದಾಗುತ್ತಿದ್ದು, ಡ್ಯಾಂ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿದೆ.

ಬಳಕೆಗೆ ಇರುವುದು ಕೇವಲ 16 ಟಿಎಂಸಿ ನೀರು:
ಪ್ರಸ್ತುತ ಜಲಾಶಯದಲ್ಲಿ ಒಟ್ಟು 22 ಟಿಎಂಸಿ ನೀರು ಮಾತ್ರ ಶೇಖರಣೆಯಾಗಿದೆ. ಇದರಲ್ಲಿ 6 ಟಿಎಂಸಿ ಡೆಡ್ ಸ್ಟೋರೇಜ್ (ಬಳಕೆಗೆ ಬಾರದ ತಳಭಾಗದ ನೀರು) ಆಗಿರುವುದರಿಂದ, ಪ್ರಸ್ತುತ ಬಳಕೆಗೆ ಲಭ್ಯವಿರುವುದು ಕೇವಲ 16 ಟಿಎಂಸಿ ನೀರು ಮಾತ್ರ. ವರ್ಷದ ಆರಂಭಿಕ ತಿಂಗಳುಗಳಲ್ಲೇ ಇಷ್ಟೊಂದು ಕಡಿಮೆ ಪ್ರಮಾಣದ ನೀರು ಉಳಿದಿರುವುದು ಮುಂದಿನ ದಿನಗಳಲ್ಲಿ ತೀವ್ರ ಜಲಕ್ಷಾಮಕ್ಕೆ ಮುನ್ನುಡಿ ಬರೆಯುವ ಸೂಚನೆ ನೀಡಿದೆ.

ಮುಂಬರುವ ಕಠಿಣ ಬೇಸಿಗೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು, ಮಂಡ್ಯ ಹಾಗೂ ಕಾವೇರಿ ನೀರನ್ನೇ ನೆಚ್ಚಿಕೊಂಡಿರುವ ಸಮೀಪದ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗುವ ಭೀತಿ ಎದುರಾಗಿದೆ.


Spread the love

About Laxminews 24x7

Check Also

ಯುವತಿಗೆ ಮತ್ತು ಬರಿಸಿ ರೇಪ್‌ ಆರೋಪ – ಯುವಕ ಸಮೀರ್‌ ಬಂಧನ

Spread the loveಬೆಂಗಳೂರು: ರಾಜಸ್ಥಾನದ ಜೈಪುರದಿಂದ  ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬಳು ಅಪರಿಚಿತನೊಬ್ಬನ ಸ್ನೇಹ ಬೆಳೆಸಿ ಅತ್ಯಾಚಾರಕ್ಕೊಳಗಾಗಿರುವ ಘಟನೆ ಬೆಳಕಿಗೆ ಬಂದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ