ಶಿವಮೊಗ್ಗ: ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಒಂದು ಭೂತ ಆವರಿಸಿದೆ. ರಾಜ್ಯಕ್ಕೆ ಒಂದು ಇತಿಹಾಸ ಇದೆ. ಸಂಸ್ಕೃತಿ, ಸಂಸ್ಕಾರ, ಪರಂಪರೆ ಇದೆ. ಇಂತಹ ಕರ್ನಾಟಕಕ್ಕೆ ಕಳಂಕ ತರುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರಂತ ಹಿರಿಯ ನಾಯಕರು ಯಾವುದೇ ಪಕ್ಷ ಇರಬಹುದು. ದೇಶಕ್ಕೆ ಮೋದಿ, ಅಟಲ್ ಜೀ ನಮಗೆ ಆದರ್ಶ. ರಾಜ್ಯದಲ್ಲಿ ರೈತನಾಯಕ ಯಡಿಯೂರಪ್ಪ ಅವರು ನಮಗೆ ಆದರ್ಶ ಎಂದ ಅವರು, ಜೆಡಿಎಸ್‌ನ ದೇವೇಗೌಡರು ಪ್ರಧಾನಿಯಾಗಿದ್ದರು. ಅದೇ ರೀತಿ ಸಿದ್ದರಾಮಯ್ಯ ಕೂಡ ಹಿಂದುಳಿದ ವರ್ಗದ ನಾಯಕರು. ಇಂದು ಸಿದ್ದರಾಮಯ್ಯರಂತ ನಾಯಕರಿಗೆ ಸ್ಟಿಂಗ್ ಆಪರೇಷನ್ ಅಂತ ಹೇಳುತ್ತಾರೆ. ಇಡೀ ಕುಟುಂಬ ಇವತ್ತು ಅನುಮಾನದಿಂದ ನೋಡುವಂತಾಗಿದೆ. ಇದರ ಮೂಲ ಯಾರು? ಇದನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿಲ್ಲ, ಅದನ್ನು ಎದುರಿಸಿಲ್ಲ ಅವರಿಗೆ ಸಮಯವಿಲ್ಲ. ಸಾರಾಸಗಟಾಗಿ ರಾಜ್ಯದ ಜನ ತಿರಸ್ಕರಿಸುತ್ತಾರೆ ಎಂದು ಕಾಂಗ್ರೆಸ್‌ಗೆ ಗೊತ್ತಿದೆ. ಕಾಂಗ್ರೆಸ್ ಧೂಳಿಪಟ ಆಗುತ್ತದೆ. ಅದೇ ಭಯಕ್ಕೆ ಸ್ಥಳೀಯ ಸಂಸ್ಥೆ ಎಲೆಕ್ಷನ್ ಮಾಡುತ್ತಿಲ್ಲ ಎಂದು ಲೇವಡಿ ಮಾಡಿದ ಅವರು, ಬರಗಾಲದಿಂದ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ. ರೈತರ ಸಂಕಷ್ಟ ಕೇಳಲು ಸಿಎಂ, ಸಚಿವರು ಹಾಗೂ ಶಾಸಕರಿಗೆ ಸಮಯ ಇಲ್ಲ. ಬರೀ ಕಾಲಹರಣ ಮಾಡುತ್ತಿದ್ದಾರೆ. ಬರದಿಂದ ಬೆಳೆ ಕಳೆದುಕೊಂಡ ರೈತರಿಗೆ ಸರ್ಕಾರ ಭಿಕ್ಷುಕರ ರೀತಿ 2500 ರೂ. ಪರಿಹಾರ ಕೊಡುತ್ತಿದೆ. ಅದು ಸಹ ಸರಿಯಾಗಿ ಬರುತ್ತಿಲ್ಲ. ರೈತರಿಗೆ 50 ಸಾವಿರ ರೂ. ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ ಅವರು, ಅಂಗವಿಕಲರ ವೇತನ, ಹಿರಿಯ ನಾಯಕರ ವೇತನ ಬರ್ತಿಲ್ಲ. ಯಾವುದೇ ವರ್ಗಕ್ಕೆ ನ್ಯಾಯ ಕೊಡುವ ಕೆಲಸ ಸರ್ಕಾರ ಮಾಡುತ್ತಿಲ್ಲ. ಕೇವಲ ಸ್ಟಿಂಗ್ ಆಪರೇಷನ್‌ನಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಸ್ಟಿಂಗ್ ಆಪರೇಷನ್ ಗೆ ಮೂಲ ಯಾರು? ತನಿಖೆ ಮಾಡಬೇಕು. ಯತೀಂದ್ರ ಸಿದ್ದರಾಮಯ್ಯ ಸ್ಟಿಂಗ್‌ಗೆ ನಮ್ಮ ಪಕ್ಷದವರೇ ಕಾರಣ ಅಂದಿದ್ದಾರೆ. ಇದಕ್ಕಿಂತ ತಾಜಾ ಉದಾಹರಣೆ ಬೇಕಾ? ಸರ್ಕಾರಕ್ಕೆ ಮಾನ ಮರ್ಯಾದೆ ಇದ್ಯಾ? ಮುಖ್ಯಮಂತ್ರಿಗಳು ಮತ ಕೊಟ್ಟ ಜನರನ್ನೇ ಮರೆತಿದ್ದಾರೆ. ಅಧಿಕಾರದ ಭ್ರಮೆಯಲ್ಲಿ ತೇಲಾಡುತ್ತಿದ್ದಾರೆ. ಪಂಚೇಂದ್ರೀಯಗಳಿಲ್ಲದ ಸರ್ಕಾರ ಇದು. ನಾಡಿನ ಜನ ಹಾಗೂ ರೈತರು ಹಿಡಿಶಾಪ ಹಾಕುತ್ತಿದ್ದು, ಮೋಹಿನಿ ತಲೆ ಮೇಲೆ ಕೈಯಿಟ್ಟು ಭಸ್ಮಾಸುರನನ್ನ ಭಸ್ಮ ಮಾಡಿದ ಸ್ಥಿತಿ ಕಾಂಗ್ರೆಸ್‌ಗೆ ಬರುತ್ತದೆ. ದೀಪ ಪ್ರಕಾಶಮಾನವಾಗಿ ಉರಿದು ಏನಾಗುತ್ತೋ, ಅದೇ ಸ್ಥಿತಿ ಕಾಂಗ್ರೆಸ್‌ಗೆ ಬರುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ವ ನಾಶವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
Laxmi News 24×7