ಮಂಗಳೂರು: ಏಷ್ಯನ್ ಗೇಮ್ಸ್ ರಿಲೇಯಲ್ಲಿ ಚಿನ್ನದ ಪದಕ ಗೆದ್ದಿರುವ ಕರ್ನಾಟಕದ ಕ್ರೀಡಾಪಟು ಎಂ.ಆರ್. ಪೂವಮ್ಮ ಮಂಗಳೂರಿಗೆ ಆಗಮಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೂವಮ್ಮ ಅವರಿಗೆ ಅಭಿಮಾನಿಗಳು ಹಾಗೂ ಕ್ರೀಡಾಭಿಮಾನಿಗಳಿಂದ ಅದ್ಧೂರಿ ಸ್ವಾಗತ ದೊರೆಯಿತು.
ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಂ.ಆರ್. ಪೂವಮ್ಮ, ದೇಶಕ್ಕೆ ಮೆಡಲ್ ತಂದುಕೊಟ್ಟಿರುವುದು ನನಗೆ ತುಂಬಾ ಖುಷಿ ನೀಡಿದೆ. ಆದರೆ, ರಾಜ್ಯ ಸರ್ಕಾರದಿಂದ ನಿರೀಕ್ಷಿತ ಪ್ರೋತ್ಸಾಹ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಸರ್ಕಾರದಿಂದ ಕ್ರೀಡಾಪಟುಗಳಿಗೆ ಸೂಕ್ತ ಬೆಂಬಲ ಸಿಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಮೇಲೆ ಅಸಮಾಧಾನ
ಮೆಡಲ್ ಗೆದ್ದ ತಮ್ಮ ತಂಡದ ಎಲ್ಲರಿಗೂ ರಾಜ್ಯದ ಮುಖ್ಯಮಂತ್ರಿ ಕರೆ ಮಾಡಿ ಶುಭ ಹಾರೈಸಿದ್ದಾರೆ. ಆದರೆ, ತಮಗೆ ಮಾತ್ರ ನಿನ್ನೆ ಎಲ್ಲಾ ಕಡೆ ಸುದ್ದಿಯಾದ ಬಳಿಕ ಡಿಸಿಎಂ ಪರಮೇಶ್ವರ್ ಕರೆ ಮಾಡಿದ್ದಾರೆ ಎಂದು ಪೂವಮ್ಮ ಹೇಳಿದ್ದಾರೆ.
ದೇಶಕ್ಕೆ ಮೆಡಲ್ ತಂದುಕೊಟ್ಟಿರುವುದು ನನಗೆ ತುಂಬಾ ಖುಷಿ ನೀಡಿದೆ. ಆದರೆ, ನಮ್ಮ ರಾಜ್ಯ ಸರ್ಕಾರದಿಂದ ನಮಗೆ ಯಾವುದೇ ಪ್ರೋತ್ಸಾಹ ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.
ಬಹುಮಾನದ ಮೊತ್ತ ಹೆಚ್ಚಿಸಲು ಒತ್ತಾಯ
ಬೇರೆ ರಾಜ್ಯ ಸರ್ಕಾರಗಳು ಚಿನ್ನದ ಪದಕ ಗೆದ್ದ ಕ್ರೀಡಾಪಟುಗಳಿಗೆ 3 ಕೋಟಿ ರೂ.ವರೆಗೆ ಬಹುಮಾನ ನೀಡುತ್ತವೆ. ಆದರೆ, ಕರ್ನಾಟಕ ಸರ್ಕಾರ 35 ಲಕ್ಷ ರೂ. ನೀಡುತ್ತಿದೆ. ಬಹುಮಾನದ ಮೊತ್ತವನ್ನು ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಇದರಿಂದ ನಮ್ಮ ರಾಜ್ಯದ ಎಲ್ಲಾ ಕ್ರೀಡಾಪಟುಗಳಿಗೆ ಸಹಕಾರಿಯಾಗುತ್ತದೆ. ಮುಖ್ಯಮಂತ್ರಿ ಅವರಿಗೆ ಈ ಮೂಲಕ ಒತ್ತಾಯಿಸುತ್ತೇನೆ. ರಾಜ್ಯ ಸರ್ಕಾರ ಎಲ್ಲಾ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಬೇಕು ಎಂದು ಎಂ.ಆರ್. ಪೂವಮ್ಮ ಹೇಳಿದ್ದಾರೆ.
2 ಪದಕ:
ಮಹಿಳೆಯರ 4×400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಕಿರಣ್ ಪಹಲ್, ಪ್ರಾಚಿ ಚೌಧರಿ ಮತ್ತು ವಿಥ್ಯಾ ರಾಮರಾಜ್ ಅವರನ್ನೊಳಗೊಂಡ ಭಾರತದ ತಂಡ 3:29.69 ನಿಮಿಷಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಮುಡಿಗೇರಿಸಿಕೊಂಡಿತ್ತು. 4×400 ಮೀಟರ್ ಮಿಶ್ರ ರಿಲೇ ಸ್ಪರ್ಧೆಯಲ್ಲಿ ಮನು ಟಿ.ಎಸ್, ವಿಶಾಲ್ ಟಿ.ಕೆ ಮತ್ತು ವಿಥ್ಯಾ ರಾಮರಾಜ್ ಅವರೊಂದಿಗೆ ಓಡಿ ಪೂವಮ್ಮ ಬೆಳ್ಳಿ ಪದಕ ಗೆದ್ದಿದ್ದಾರೆ.
Laxmi News 24×7