ನವದೆಹಲಿ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ ಎದುರಾಗಬಹುದಾದ ಸಾಧ್ಯತೆ ಇದೆ. ವಿನಯ್ ಕುಲಕರ್ಣಿಗೆ ಜಾಮೀನು ನೀಡಿರುವುದಕ್ಕೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದು, ಕೊಲೆ ಕೇಸ್ ಹೊಂದಿರುವವರು ವಿಧಾನಸಭೆ ಪ್ರವೇಶಿಸಬೇಕೇ ಎಂದೂ ಖಾರವಾಗಿ ಪ್ರಶ್ನಿಸಿದೆ.
ಶಾಸಕ ವಿನಯ್ ಕುಲಕರ್ಣಿಗೆ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಹಾಗೂ ಯೋಗೇಶ್ ಗೌಡ ಅವರ ಸಹೋದರ ಗುರುನಾಥ್ ಗೌಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇಂದು ವಿಚಾರಣೆ ವೇಳೆ ಕೋರ್ಟ್ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಪ್ರಕರಣವನ್ನು ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ನೇತೃತ್ವದ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ಸಮಯದಲ್ಲಿ ವಿನಯ್ ಕುಲಕರ್ಣಿ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿ ಮೇಲ್ಮನವಿ ಅರ್ಜಿಗಳನ್ನು ರದ್ದು ಮಾಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಈ ರೀತಿಯ ಕೊಲೆಯಲ್ಲಿ ಭಾಗಿಯಾಗಿರುವವರು ವಿಧಾನಸಭೆಯಲ್ಲಿ ಇರಬೇಕೇ? ಇಂದು ಕೊಲೆಯಲ್ಲಿ ಭಾಗಿಯಾದವರು ನಾಳೆ ದರೋಡೆ ಮಾಡಿದ್ರು ವಿಧಾನಸಭೆ ಪ್ರವೇಶಿಸುತ್ತಾರೆ. ಗಂಭೀರ ಸ್ವರೂಪದ ಆರೋಪಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು ವಿಧಾನಸಭೆಯಲ್ಲಿ ಮುಂದುವರಿಯುವ ಅರ್ಹತೆ ಇದಿಯೇ’ ಎಂದು ನ್ಯಾಯಧೀಶರು ಖಾರವಾಗಿ ಪ್ರಶ್ನಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ರಾಜ್ಯ ಸರ್ಕಾರ ಮತ್ತು ಗುರುನಾಥ್ ಗೌಡ ಪರ ವಕೀಲರು, ಅರ್ಜಿ ವಜಾ ಮಾಡಬಾರದು, ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ನಮ್ಮ ವಾದ ಆಲಿಸಬೇಕು ಮತ್ತು ನಮ್ಮ ಪ್ರತಿಕ್ರಿಯೆ ಕೇಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಕೋರ್ಟ್ ಕೌಂಟರ್ ಅಫಿಡವಿಟ್ ಫೈಲ್ ಮಾಡಲು ವಿನಯ್ ಕುಲಕರ್ಣಿ ಪರ ವಕೀಲರಿಗೆ ಸೂಚಿಸಿ ಅ.9 ಕ್ಕೆ ವಿಚಾರಣೆ ಮುಂದೂಡಿತು.
Laxmi News 24×7