Breaking News

ಮೂಡಾ 50:50 ಸೈಟು ಹಂಚಿಕೆ ಹಗರಣ – ಹಂಚಿಕೆಯಾಗಿದ್ದ ಎಲ್ಲಾ 1,100 ಸೈಟುಗಳು ತಕ್ಷಣದಿಂದಲೇ ರದ್ದು

Spread the love

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿಯಮಗಳನ್ನ ಉಲ್ಲಂಘಿಸಿ ಮಾಡಲಾಗಿದ್ದ 50:50 ಬದಲಿ ನಿವೇಶನಗಳ ಹಂಚಿಕೆಯನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ.

ಏಕಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ, ಉನ್ನತ ಮಟ್ಟದ ತಾಂತ್ರಿಕ ಸಮಿತಿಯು ನೀಡಿರುವ ವರದಿಯನ್ವಯ ಈ ಆದೇಶ ಮಾಡಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ 2023ರ ಮಾರ್ಚ್ 14ರ ನಿರ್ದೇಶನವನ್ನ ಉಲ್ಲಂಘಿಸಿ ಮಾಡಲಾದ ಎಲ್ಲಾ 50:50 ಬದಲಿ ನಿವೇಶನಗಳ ಹಂಚಿಕೆಯನ್ನ ರದ್ದುಪಡಿಸಿ ಆದೇಶ ಮಾಡಿದೆ.

ನಿಯಮ ಉಲ್ಲಂಘಿಸಿ ಈಗಾಗಲೇ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿರುವ ಬದಲಿ ನಿವೇಶನಗಳ ‘ಕ್ರಯಪತ್ರ’ಗಳನ್ನ (Sale Deed) ರದ್ದುಪಡಿಸಲು ಸಿವಿಲ್ ನ್ಯಾಯಾಲಯದಲ್ಲಿ ತಕ್ಷಣವೇ ದಾವೆ ಹೂಡುವುದು. ಇದುವರೆಗೆ ಕ್ರಯಪತ್ರವಾಗದ ಪ್ರಕರಣಗಳಲ್ಲಿ, ಸರ್ಕಾರದಿಂದ ಸ್ಪಷ್ಟ ಮಾರ್ಗಸೂಚಿ ರಚನೆಯಾಗಿ ಸೂಕ್ತ ನಿರ್ದೇಶನ ಬರುವವರೆಗೂ ಪ್ರಾಧಿಕಾರದಿಂದ ಯಾವುದೇ ಕ್ರಯಪತ್ರಗಳನ್ನ ನೀಡದಂತೆ ಹೇಳಿದೆ. ಈಗಾಗಲೇ ನೋಂದಣಿಯಾಗಿರುವ ನಿವೇಶನಗಳಿಗೆ ಖಾತಾ ಮಾಡಿಕೊಡುವುದನ್ನೂ ತಡೆಹಿಡಿಯಲು ಮೈಸೂರು ಮಹಾನಗರ ಪಾಲಿಕೆ, ಸಂಬಂಧಪಟ್ಟ ನಗರಸಭೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡುವಂತೆ ಸೂಚಿಸಿದೆ.

ಒಂದು ವೇಳೆ ಖಾತಾ ಆಗಿದ್ದಲ್ಲಿ, ಕರ್ನಾಟಕ ನಗರ ಪಾಲಿಕೆಗಳ ಕಾಯ್ದೆ 1976, ಕರ್ನಾಟಕ ಮುನಿಸಿಪಲ್ ಕಾಯ್ದೆ 1961 ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993 ರಡಿ ನಿಯಮಾನುಸಾರ ರದ್ದುಪಡಿಸಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸುವುದು. ಈ ಆದೇಶದ ಮೇರೆಗೆ ಕೈಗೊಂಡ ಕ್ರಮಗಳ ಕುರಿತು ಅನುಪಾಲನಾ ವರದಿಯನ್ನು ಸರ್ಕಾರಕ್ಕೆ ತಕ್ಷಣವೇ ಸಲ್ಲಿಸಲು ಸೂಚಿಸಲಾಗಿದೆ.

ಸೂಚನೆ ಪಾಲನೆ ಮಾಡಲು ವಿಫಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸುಮಾರು 1,100, 50:50 ಬದಲಿ ನಿವೇಶನಗಳನ್ನು ರದ್ದುಪಡಿಸಲು ಸರ್ಕಾರ ನಿರ್ದೇಶನ ನೀಡಿದೆ. ಇದರ ಮೌಲ್ಯ ಸರಿ ಸುಮಾರು 2,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ.


Spread the love

About Laxminews 24x7

Check Also

ಡ್ಯೂಪ್ಲಿಕೇಟ್ ಕೀ ಬಳಸಿ ಐಷಾರಾಮಿ ಕಾರುಗಳ ಕಳ್ಳತನ – ಕರ್ನಾಟಕದಿಂದ ರಾಜಸ್ಥಾನವರೆಗೆ ‘ಕಾರ್‌ ಕಳ್ಳರ’ ಜಾಲ; ಇಬ್ಬರು ಅರೆಸ್ಟ್‌

Spread the loveಬೆಂಗಳೂರು: ಡ್ಯೂಪ್ಲಿಕೇಟ್ ಕೀ ಹಾಗೂ ಅತ್ಯಾಧುನಿಕ ಉಪಕರಣಗಳನ್ನ ಬಳಸಿ ದೇಶದ ವಿವಿಧೆಡೆ ಐಷಾರಾಮಿ ಕಾರುಗಳನ್ನು ಕಳ್ಳತನ ಮಾಡಿ, ರಾಜಸ್ಥಾನದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ