Breaking News

ಜೆಸಿಬಿಯನ್ನು ಕದ್ದು ರೇಸ್‌ ಕಾರಿನಂತೆ ಓಡಿಸಿದ ಭೂಪ – ಬ್ಯಾರಿಕೇಡ್‌ಗಳು ಪುಡಿ ಪುಡಿ, ಪೊಲೀಸರಿಂದ ಫಿಲ್ಮಿ ಸ್ಟೈಲ್‌ ಚೇಸಿಂಗ್‌

Spread the love

ಭುವನೇಶ್ವರ: ಬೈಕ್, ಕಾರು ಕದ್ದು ಪೊಲೀಸರಿಂದ ತಪ್ಪಿಸಿಕೊಳ್ಳಲು ಹೆದ್ದಾರಿಯಲ್ಲಿ ವೇಗವಾಗಿ ಪರಾರಿಯಾಗುವ ಕಳ್ಳರ ಬಗ್ಗೆ ಕೇಳಿರುತ್ತೀರಿ. ಆದರೆ ಒಡಿಶಾದ  ಗಂಜಾಂ ಜಿಲ್ಲೆಯಲ್ಲಿ ಖದೀಮನೊಬ್ಬ ಜೆಸಿಬಿಯನ್ನೇ ಕದ್ದು ರಸ್ತೆಯಲ್ಲಿ ಮನ ಬಂದಂತೆ ಚಲಾಯಿಸಿದ್ದಾನೆ.

ಸಾಮಾನ್ಯವಾಗಿ ನಿಧಾನವಾಗಿ ಸಾಗುವ ಜೆಸಿಬಿಯಲ್ಲೇ ಈ ಭೂಪ ಹೆದ್ದಾರಿಯಲ್ಲಿ ರೇಸ್ ಕಾರ್ ತರಹ ಅಬ್ಬರಿಸಿದ್ದಾನೆ. ಜೆಸಿಬಿ ಬ್ಯಾರಿಕೇಡ್‌ಗಳನ್ನು ಮುರಿದು ವೇಗವಾಗಿ ಸಾಗುತ್ತಿರುವ ಜೆಸಿಬಿಯನ್ನು ಪೊಲೀಸರು ಚೇಸಿಂಗ್‌ ಮಾಡುತ್ತಿರುವ ದೃಧ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಆಗಸ್ಟ್ 14 ರಂದು ಖಲ್ಲಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೆಸಿಬಿ ಕಳ್ಳತನವಾಗಿರುವ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆ ಇಡೀ ಪೊಲೀಸ್ ಪಡೆ ಅಲರ್ಟ್ ಆಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಖಲ್ಲಿಕೋಟೆ, ರಂಭಾ, ಪುರುಷೋತ್ತಮಪುರ ಹಾಗೂ ಕವಿಸೂರ್ಯನಗರ ಠಾಣೆಯ ಪೊಲೀಸರು ವಾಹನವನ್ನು ಸುತ್ತುವರಿಯಲು ಜಂಟಿ ಕಾರ್ಯಾಚರಣೆಗೆ ಇಳಿದರು.

ಜೆಸಿಬಿಯನ್ನು ಅಡ್ಡಗಟ್ಟಲು ಪೊಲೀಸರು ಮಾರ್ಗದುದ್ದಕ್ಕೂ ಸಾಲು ಸಾಲು ಬಲವಾದ ಬ್ಯಾರಿಕೇಡ್‌ಗಳನ್ನು ಅಳವಡಿಸಿ ರಸ್ತೆ ಬಂದ್ ಮಾಡಿದ್ದರು. ಆದರೆ ಹಿಂಬದಿಯಿಂದ ಪೊಲೀಸರ ಸೈರನ್ ಸದ್ದು ಕೇಳುತ್ತಿದ್ದಂತೆ ಕಳ್ಳ ಜೆಸಿಬಿಯನ್ನು ಅತಿ ವೇಗದಲ್ಲಿ ನುಗ್ಗಿಸಿ ಎದುರಿದ್ದ ಬ್ಯಾರಿಕೇಡ್‌ಗಳನ್ನೆಲ್ಲಾ ಒಂದಾದ ಮೇಲೊಂದರಂತೆ ಪುಡಿಪುಡಿ ಮಾಡಿ ಮುನ್ನುಗ್ಗಿದ್ದಾನೆ.

ಯಾವುದೇ ಸಿನೆಮಾ ಸಾಹಸ ದೃಶ್ಯಕ್ಕೂ ಕಮ್ಮಿಯಿಲ್ಲದಂತೆ ರಸ್ತೆ ತಡೆಗಳನ್ನು ಧ್ವಂಸಗೊಳಿಸಿ ತಪ್ಪಿಸಿಕೊಳ್ಳುತ್ತಿದ್ದ ದೃಶ್ಯಗಳನ್ನು ಕಂಡು ಸ್ಥಳೀಯರು ಹಾಗೂ ಪೊಲೀಸರು ದಂಗಾಗಿ ಹೋಗಿದ್ದಾರೆ.

ಈ ರೋಚಕ ಬೆನ್ನಟ್ಟುವಿಕೆ ಅಂತಿಮವಾಗಿ ಕವಿಸೂರ್ಯನಗರ ಠಾಣಾ ವ್ಯಾಪ್ತಿಯ ಗುಡಿಯಾಲಿ ಎಂಬಲ್ಲಿಗೆ ತಲುಪಿದೆ. ಇನ್ನೇನು ಪೊಲೀಸರ ಕೈಗೆ ಸಿಕ್ಕಿಬೀಳಬೇಕು ಎನ್ನುವಷ್ಟರಲ್ಲಿ ಕಳ್ಳ ಜೆಸಿಬಿಯನ್ನು ಸಮೀಪದ ಕೃಷಿ ಜಮೀನಿನೊಳಗೆ ನುಗ್ಗಿಸಿ ಕತ್ತಲಲ್ಲಿ ಪರಾರಿಯಾಗಿದ್ದಾನೆ.

ಪೊಲೀಸರು ಜಮೀನಿನಲ್ಲಿ ನಿಂತಿದ್ದ ಜೆಸಿಬಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಪುರುಷೋತ್ತಮಪುರ ಎಸ್‌ಡಿಪಿಒ ಸುಜಿತ್ ಕುಮಾರ್ ನಾಯಕ್ ತಿಳಿಸಿದ್ದಾರೆ.

ಜೆಸಿಬಿ ವಾಹನವು ಬ್ಯಾರಿಕೇಡ್‌ಗಳನ್ನು ಲೆಕ್ಕಿಸದೆ ಧೂಳೀಪಟ ಮಾಡುತ್ತಾ ವೇಗವಾಗಿ ಸಾಗುವ ರೋಮಾಂಚಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ