Breaking News

ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿಗೆ ಗೌರವ ವಂದನೆ – ರಾಷ್ಟ್ರಗೀತೆಗೂ ಮುನ್ನ ಮೊಳಗಿದ ವಂದೇ ಮಾತರಂ ಗೀತೆ

Spread the love

ನವದೆಹಲಿ: ದೇಶಾದ್ಯಂತ ಇಂದು 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಟ್ಟದ ಸ್ವಾತಂತ್ರ್ಯೋತ್ಸವದ ನೇತೃತ್ವವನ್ನು ಪ್ರಧಾನಿ ನರೇಂದ್ರ ಮೋದಿ ವಹಿಸಿದ್ದಾರೆ.

ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧೀಜಿ ಅವರ ಸ್ಮಾರಕಕ್ಕೆ ಗೌರವ ಪುಷ್ಪನಮನ ಸಲ್ಲಿಸಿದ ಬಳಿಕ ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್ ಹಾಗೂ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಸ್ವಾಗತ ಕೋರಿ ಬರಮಾಡಿಕೊಂಡರು. ಬಳಿಕ ರಕ್ಷಣಾ ಕಾರ್ಯದರ್ಶಿಯವರು ದೆಹಲಿ ಪ್ರದೇಶದ ಜನರಲ್ ಆಫೀಸರ್ ಕಮಾಂಡಿಂಗ್ (GoC) ಲೆಫ್ಟಿನೆಂಟ್ ಜನರಲ್ ರಾಜೇಶ್ ಸೇಥಿ ಅವರನ್ನು ಪ್ರಧಾನಿಗೆ ಪರಿಚಯಿಸಿದರು.

ಪ್ರಧಾನಿ ಮೋದಿ ಅವರಿಗೆ ಕೆಂಪುಕೋಟೆಯಲ್ಲಿ ಗಾರ್ಡ್ ಆಫ್ ಆನರ್ ಗೌರವ ಸಲ್ಲಿಸಲಾಯಿತು. ಧ್ವಜಾರೋಹಣಕ್ಕೂ ಮುನ್ನ ದೆಹಲಿಯ ಕೆಂಪುಕೋಟೆಯಲ್ಲಿ ಇದೇ ಮೊದಲ ಬಾರಿಗೆ ವಂದೇ ಮಾತರಂ ಗೀತೆಯನ್ನ ನುಡಿಸಲಾಯಿತು. ವಂದೇ ಮಾತರಂ ಗೀತೆಗೆ 150ನೇ ವರ್ಷಾಚರಣೆ ಹಿನ್ನೆಲೆ ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂ ನುಡಿಸಲಾಯಿತು. ನಂತರ ರಾಷ್ಟ್ರಗೀತೆಯನ್ನ ನುಡಿಸಲಾಯಿತು.

5,000 ಕ್ಕೂ ಹೆಚ್ಚು ವಿಶೇಷ ಅತಿಥಿಗಳು
ಕೆಂಪುಕೋಟೆಯಲ್ಲಿ ನಡೆಯುತ್ತಿರುವ ಸಮಾರಂಭವನ್ನು ಕಣ್ತುಂಬಿಕೊಳ್ಳಲು ದೇಶದ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಸುಮಾರು 5,000 ವಿಶೇಷ ಅತಿಥಿಗಳನ್ನು ಆಹ್ವಾನಿಸಲಾಗಿದೆ. ಯುವ ಆವಿಷ್ಕಾರಕರು, ‘ಮೈ ಭಾರತ್’ ಸ್ವಯಂಸೇವಕರು, ವಿವಿಧ ಕ್ಷೇತ್ರಗಳ ಇಂಟರ್ನ್‌ಗಳು, ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳು, ಸ್ವಚ್ಛತಾ ಕಾರ್ಮಿಕರು, ಬೀದಿ ವ್ಯಾಪಾರಿಗಳು ಹಾಗೂ ಸಾಂಪ್ರದಾಯಿಕ ಕರಕುಶಲ ಕ್ಷೇತ್ರದ ಪಿಎಂ ವಿಶ್ವಕರ್ಮಾ ಯೋಜನೆ ಫಲಾನುಭವಿಗಳು ಸೇರಿದಂತೆ ಹಲವು ವರ್ಗದ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

22 ಭಾರತೀಯ ಭಾಷೆಗಳಲ್ಲಿ AI ಅನುವಾದ
ಈ ವರ್ಷದ ಸ್ವಾತಂತ್ರ್ಯೋತ್ಸವದಲ್ಲಿ ತಂತ್ರಜ್ಞಾನಕ್ಕೂ ವಿಶೇಷ ಸ್ಥಾನ ನೀಡಲಾಗಿದೆ. ಪ್ರಧಾನಿ ಮೋದಿಯವರ ಸ್ವಾತಂತ್ರ್ಯ ದಿನದ ಭಾಷಣವನ್ನು ಭಾಷಿಣಿ  ಸೇರಿದಂತೆ ಡಿಜಿಟಲ್ ತಂತ್ರಜ್ಞಾನಗಳ ನೆರವಿನಿಂದ ದೇಶದ 22 ಭಾರತೀಯ ಭಾಷೆಗಳಲ್ಲಿ ರಿಯಲ್‌ಟೈಮ್ AI ಅನುವಾದ ಮಾಡುವ ವ್ಯವಸ್ಥೆ ರೂಪಿಸಲಾಗಿದೆ. ಇದರಿಂದ ದೇಶದ ವಿವಿಧ ಭಾಷೆಗಳ ಜನರು ಪ್ರಧಾನಿಯವರ ಭಾಷಣವನ್ನು ತಮ್ಮದೇ ಭಾಷೆಯಲ್ಲಿ ತಕ್ಷಣವೇ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿದೆ.


Spread the love

About Laxminews 24x7

Check Also

ತಿರಂಗ ಯಾತ್ರೆಯಲ್ಲಿ ಗಮನ ಸೆಳೆದ ಈಸೂರು ದಂಗೆಯ ಸ್ತಬ್ಧಚಿತ್ರ

Spread the loveಶಿವಮೊಗ್ಗ: ನಗರದ  ಶೀನಪ್ಪಶೆಟ್ಟಿ ವೃತ್ತದಲ್ಲಿ ಸ್ವಾತಂತ್ರ್ಯೋತ್ಸವ  ಅಂಗವಾಗಿ ಬಿಜೆಪಿ ವತಿಯಿಂದ ರಾಮಣ್ಣಶ್ರೇಷ್ಟಿ ಪಾರ್ಕ್‌ನಿಂದ ಗೋಪಿ ವೃತ್ತದವರೆಗೆ ತಿರಂಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ