ಬೆಂಗಳೂರು: ಇಡೀ ದೇಶವೇ ಇಂದು 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದೆ. ಈ ನಿಟ್ಟಿನಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿದರು.
ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಧ್ವಜಾರೋಹಣ ನೆರವೇರಿಸಿ, ಬಳಿಕ ರಾಷ್ಟ್ರಗೀತೆ, ವಂದೇ ಮಾತರಂ ಗೀತೆಗೆ ಗೌರವ ಸಲ್ಲಿಸಿದರು. ಇದೇ ವೇಳೆ ನಾಡಿನ ಜನತೆಗೆ ಶುಭಾಶಯ ಕೋರಿದರು.
ನಾಡಿನ ಜನತೆಗೆ ಮತ್ತು ಭಾರತದ ನಾಗರಿಕರಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರುತ್ತೇನೆ. ದೇಶದ ಶಾಂತಿಗೊಸ್ಕರ ದುಡಿದ ಎಲ್ಲರಿಗೂ ವಂದನೆ ಸಲ್ಲಿಸುತ್ತೇನೆ. ಜನರ ಒಬ್ಬ ಸೇವಕನಾಗಿ ಇಂದು ರಾಷ್ಟ್ರದ ಧ್ವಜವನ್ನ ಹಾರಿಸಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲರನ್ನ ಒಟ್ಟಿಗೆ ತೆಗೆದುಕೊಂಡು ಹೋಗಿ ಶಾಂತಿ ನೆಮ್ಮದಿ , ಸಹಬಾಳ್ವೆಯನ್ನ ಕಾಪಾಡುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಇದಕ್ಕೂ ಮುನ್ನ ಎಕ್ಸ್ನಲ್ಲಿ ವಿಶೇಷ ವಿಡಿಯೋ ಹಂಚಿಕೊಳ್ಳುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಶುಭಕೋರಿದ್ದರು.
ಎಕ್ಸ್ನಲ್ಲಿ ಏನಿದೆ?
ʻಸ್ವಾತಂತ್ರ್ಯ ಎಂಬುದು ಅಸಂಖ್ಯಾತ ಹೋರಾಟಗಾರರ ತ್ಯಾಗ-ಬಲಿದಾನಗಳ ಮೇಲೆ ಕಟ್ಟಲಾದ ಪ್ರಜಾಪ್ರಭುತ್ವದ ನಿರಂತರ ಹೊಣೆಗಾರಿಕೆ. ವ್ಯಕ್ತಿಗಳಿಗಿಂತ ವ್ಯವಸ್ಥೆಯೂ, ಆಡಳಿತಕ್ಕಿಂತ ಸಾರ್ವಜನಿಕರ ಹಿತಾಸಕ್ತಿಯೂ ಆದ್ಯತೆಯಾಗಬೇಕು ಎಂಬ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುತ್ತಾ, ಸಮಾಜದ ಕಟ್ಟಕಡೆಯ ಪ್ರಜೆಗೂ ಘನತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯ ದೊರಕಿಸಿಕೊಡುವುದೇ ನವಭಾರತಕ್ಕೆ ನಾವು ನೀಡಬಹುದಾದ ಮಹತ್ತರವಾದ ಕೊಡುಗೆ.
ವೈವಿಧ್ಯತೆಯೇ ನಮ್ಮ ದೇಶದ ಬಲ, ಸಾಮರಸ್ಯವೇ ನಮ್ಮ ಜೀವಾಳ. ಯಾವುದೇ ಭೇದ-ಭಾವಗಳಿಲ್ಲದೆ ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ಸಂರಕ್ಷಿಸಿ, ಸರ್ವರಿಗೂ ಉತ್ತಮ ಬದುಕು ಕಲ್ಪಿಸುವುದೇ ನಮ್ಮ ಸರ್ಕಾರದ ಪ್ರಮುಖ ಧ್ಯೇಯ. ನಾವೆಲ್ಲರೂ ಸೇರಿ ಸಮೃದ್ಧವಾದ, ಜಗತ್ತೇ ತಿರುಗಿ ನೋಡುವಂತಹ ಕರ್ನಾಟಕವನ್ನು ಕಟ್ಟಲು ಈ ಶುಭದಿನದಂದು ಸಂಕಲ್ಪ ತೊಡೋಣ. ನಾಡಿನ ಸಮಸ್ತ ಜನತೆಗೆ 80 ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳುʼ ಎಂದು ಹಾರೈಸಿದ್ದರು.
Laxmi News 24×7