ನವದೆಹಲಿ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಬಂದಿದ್ದ ದೇಣಿಗೆಯ ಕಳ್ಳತನ ಹಾಗೂ ದುರುಪಯೋಗದ ಆರೋಪಕ್ಕೆ ಸಂಬಂಧಿಸಿದಂತೆ ಇದುವರೆಗೆ ನಡೆದಿರುವ ತನಿಖೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಈ ಇಡೀ ಹಗರಣದ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆವಹಿಸಬೇಕು ಎಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದಿನ ವಾರಕ್ಕೆ ನಿಗದಿಪಡಿಸಿದೆ.
ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠವು ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು, ರಾಮಮಂದಿರದಂತಹ ಪವಿತ್ರ ಕ್ಷೇತ್ರಕ್ಕೆ ಭಕ್ತರು ನೀಡಿದ ಕೋಟ್ಯಂತರ ರೂಪಾಯಿ ದೇಣಿಗೆಯಲ್ಲಿ ನಡೆದಿರುವ ಅವ್ಯವಹಾರದ ಆರೋಪವನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ಪ್ರಸ್ತುತ ತನಿಖಾ ಹಂತ ಎಲ್ಲಿದೆ ಎಂಬುದನ್ನು ಸ್ಪಷ್ಟಪಡಿಸಲು ಸಂಬಂಧಪಟ್ಟ ತನಿಖಾ ಸಂಸ್ಥೆ ಹಾಗೂ ಸರ್ಕಾರಕ್ಕೆ ಸೂಚಿಸಿದೆ.
ಅಯೋಧ್ಯೆ ರಾಮಮಂದಿರ ಟ್ರಸ್ಟ್‌ಗೆ ದೇಶ-ವಿದೇಶಗಳ ಕೋಟ್ಯಂತರ ಭಕ್ತರು ಚೆಕ್, ನಗದು ಹಾಗೂ ಆನ್‌ಲೈನ್ ಮೂಲಕ ದೇಣಿಗೆ ನೀಡಿದ್ದರು. ಆದರೆ, ಈ ದೇಣಿಗೆಯ ನಿಧಿಯಲ್ಲಿ ಭಾರೀ ಪ್ರಮಾಣದ ಹಣ ದುರುಪಯೋಗವಾಗಿದೆ ಮತ್ತು ನಕಲಿ ಚೆಕ್‌ಗಳ ಮೂಲಕ ಹಣವನ್ನು ದೋಚಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು.
ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದರೂ, ಪ್ರಕರಣದ ವ್ಯಾಪ್ತಿ ದೊಡ್ಡದಾಗಿರುವುದರಿಂದ ಮತ್ತು ಇದರಲ್ಲಿ ಪ್ರಭಾವಿಗಳ ಕೈವಾಡ ಇರುವ ಶಂಕೆ ಇರುವುದರಿಂದ ನಿಷ್ಪಕ್ಷಪಾತ ತನಿಖೆಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಮುಂದಿನ ವಾರ ನಡೆಯಲಿರುವ ಹಿರಿಯ ನ್ಯಾಯಾಧೀಶರ ಒಳಗೊಂಡ ಪೀಠದ ವಿಚಾರಣೆಯ ಸಂದರ್ಭದಲ್ಲಿ, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
Laxmi News 24×7