Breaking News

ಮಲೆನಾಡಿನಲ್ಲಿ ಮಳೆಯ ಕೊರತೆ – ಮುಂಗಾರು ಹಂಗಾಮಿನಲ್ಲಿ ಭತ್ತದ ಬೆಳೆಗಿಲ್ಲ ಭದ್ರಾ ಡ್ಯಾಂ ನೀರು!

Spread the love

ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ 1.05 ಹೆಕ್ಟೇರ್ ಪ್ರದೇಶದ ರೈತರಿಗೆ  ರಾಜ್ಯ ಸರ್ಕಾರ ಕಹಿ ಸುದ್ದಿ ನೀಡಿದೆ. ಪ್ರಸ್ತುತ ಸನ್ನಿವೇಶದಲ್ಲಿ ಈ ಬಾರಿ ಮುಂಗಾರು ಹಂಗಾಮಿಗೆ ಸತತವಾಗಿ ನಾಲೆಗಳ ಮೂಲಕ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ.

ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ರೈತರು ಹಲವು ವರ್ಷಗಳಿಂದ ಮುಂಗಾರು ಹಂಗಾಮಿನಲ್ಲಿ ಭತ್ತದ ಬೆಳೆ ಬೆಳೆದು ಸಂತೃಪ್ತರಾಗಿದ್ದರು ಆದರೆ, ಈ ವರ್ಷ ಭತ್ತದ ಬೆಳೆಗೆ ಅಗತ್ಯವಿರುವ ನೀರು ಜಲಾಶಯದಲ್ಲಿ ಸಂಗ್ರಹವಾಗುವುದೇ ಎಂಬ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಭದ್ರಾ ಜಲಾಶಯದ ನೀರನ್ನು ಸದ್ಯದ ಸ್ಥಿತಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ಮಾತ್ರ ಸೀಮಿತಗೊಳಿಸಿ ಸರ್ಕಾರ ಆದೇಶಿಸಿದೆ.

ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ಮುಂಗಾರು ಹಂಗಾಮಿಗೆ ಭತ್ತದ ಬೆಳೆಗೆ ನೀರೊದಗಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ. ಆದರೆ, ಇದು ಈಡೇರುವುದಕ್ಕೆ ಉತ್ತಮ ರೀತಿಯಲ್ಲಿ ಮಳೆಯಾಗಬೇಕಿದೆ. ಒಂದು ವೇಳೆ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿಗೆ ಸಂಪೂರ್ಣ 120 ದಿನ ಹರಿಸಲು ಸಾಧ್ಯವಾಗದಿದ್ದರೆ ಭತ್ತದ ಕೃಷಿ ಮೇಲೆ ವ್ಯತಿರಿಕ್ತ ಪರಿಣಾಮ ನಿಶ್ಚಿತ. ಜಲಾಶಯದ ನೀರಿನ ಸಂಗ್ರಹ ತೀರಾ ಕುಸಿದರೆ ಅದು ಬೇಸಿಗೆಯಲ್ಲಿ ತೋಟಗಾರಿಕೆ ಬೆಳೆಗಳ ಮೇಲೂ ದುಷ್ಪರಿಣಾಮ ಉಂಟಾಗಲಿದೆ.

ಮುಂಬರುವ ದಿನಗಳಲ್ಲಿ ಮಳೆಯಾಗಿ ಜಲಾಶಯ ಭರ್ತಿಯಾದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಆಯೋಜಿಸಿ ಬೆಳೆಗಳಿಗೆ ನೀರು ಹರಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿರುವುದರಿಂದ ರೈತರಲ್ಲಿ ಗೊಂದಲ ಮೂಡಿದೆ. ಭತ್ತ ನಾಟಿ ಮಾಡಬೇಕೋ ಅಥವಾ ಬೇಡವೋ ಎಂಬ ಅನಿಶ್ಚಿತತೆ ರೈತರನ್ನು ಕಾಡುತ್ತಿದೆ.

ಅಚ್ಚುಕಟ್ಟು ಪ್ರದೇಶದ ಬಹುತೇಕ ಕಡೆಗಳಲ್ಲಿ ಇನ್ನೂ ಸಸಿಮಡಿಗೆ ಅಗತ್ಯವಿರುವಷ್ಟೂ ನೀರಿಲ್ಲ. ಒಂದು ವೇಳೆ ತಾತ್ಕಾಲಿಕ ನೀರಾವರಿ ವ್ಯವಸ್ಥೆ ಮಾಡಿಕೊಂಡು ಸಸಿಮಡಿ ಬೆಳೆಸಿದರೂ ಮುಂದಿನ ದಿನಗಳಲ್ಲಿ ನಾಲೆಗಳಲ್ಲಿ ನೀರು ಹರಿಯಲಿಲ್ಲ ಎಂದಾದರೆ ನಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ಭತ್ತ ಬೆಳೆಗಾರರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ.

ಭದ್ರಾ ಜಲಾಶಯದಲ್ಲಿ ಇದುವರೆಗೆ 32 ಬಾರಿ ಉತ್ತಮ ನೀರಿನ ಸಂಗ್ರಹವಾಗಿದೆ. ಇಲ್ಲವೇ 183 ಅಡಿಯ ಗಡಿ ದಾಟಿದೆ. ಉಳಿದ ಸಮಯದಲ್ಲಿ ನೀರಿನ ಅಭಾವ ಸೃಷ್ಟಿಯಾಗಿ ಭದ್ರಾ ಕಾಡಾ ಸಭೆಗಳಲ್ಲಿ ವಾಗ್ವಾದಗಳೇ ನಡೆದಿವೆ. ಬೇಸಿಗೆ ಹಂಗಾಮಿಗೆ ನೀರಿನ ಹಂಚಿಕೆ ಕಷ್ಟವಾಗಿದ್ದೂ ಇದೆ. ಕಳೆದ ಕೆಲ ದಶಕಗಳಿಂದ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಪರಿವರ್ತನೆ ಆಗಿರುವುದೇ ಸಮಸ್ಯೆಯ ಮೂಲ. ಅಪಾರ ಪ್ರಮಾಣದಲ್ಲಿ ಅಡಿಕೆ ತೋಟಗಳು ತಲೆ ಎತ್ತಿವೆ. ಏನಾದರೂ ಹೊಂದಾಣಿಕೆ ಮಾಡಿಕೊಂಡು ಮುಂಗಾರಿಗೆ ಭತ್ತ ಬೆಳೆಯಲು ನೀರು ಹರಿಸಿದರೆ ಬಿರು ಬೇಸಿಗೆಯಲ್ಲಿ ಅಡಿಕೆ ತೋಟಗಳು ಒಣಗಿ ನಿಲ್ಲುತ್ತವೆ. ಮುಂಗಾರು ಹಂಗಾಮಿಗೆ ನಾಲೆಗಳಲ್ಲಿ ನೀರು ಹರಿಸುವ ಸಂಬಂಧ ಈ ಜುಲೈ ಅಂತ್ಯಕ್ಕೆ ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆಯಿದೆ.


Spread the love

About Laxminews 24x7

Check Also

ಮರದ ರೆಂಬೆ ಬಿದ್ದು ಎರಡು ಕಾರುಗಳು ಜಖಂ – ತಪ್ಪಿದ ಭಾರೀ ಅನಾಹುತ

Spread the loveಬೆಂಗಳೂರು: ರಸ್ತೆ ಪಕ್ಕದಲ್ಲಿದ್ದ ಬೃಹತ್‌ ಮರದ ರೆಂಬೆಯೊಂದು ಬಿದ್ದು ಎರಡು ಕಾರು ಹಾಗೂ ಒಂದು ಸ್ಕೂಟಿ ಜಖಂಗೊಂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ