Breaking News

ಬೈಕ್‌ ಸಮೇತ ಸುಟ್ಟು ಕರಕಲಾಗಿದ್ದ ಯುವಕನ ಗುರುತು ಪತ್ತೆ

Spread the love

ಬೆಂಗಳೂರು: ಆನೇಕಲ್‌ನ ಸರ್ಜಾಪುರ ಸಮೀಪದ ಬಿಕ್ಕನಹಳ್ಳಿ ರಸ್ತೆಯ ನಿರ್ಜನ ಪ್ರದೇಶದಲ್ಲಿ ಬೈಕ್ ಜೊತೆಗೆ ಸುಟ್ಟು ಕರಕಲಾಗಿದ್ದ ಸ್ಥಿತಿಯಲ್ಲಿ ಯುವಕನ ಗುರುತು ಪತ್ತೆಯಾಗಿದೆ.

ಮೃತನನ್ನು ಆಂಧ್ರಪ್ರದೇಶದ ಗುಂಟೂರು ಮೂಲದ 26 ವರ್ಷದ ವಂಶಿಕೃಷ್ಣ ಎಂದು ಗುರುತಿಸಲಾಗಿದೆ. ಈ ಸಾವಿನ ಹಿಂದೆ ಕೊಲೆ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನಿನ್ನೆ ಸಂಜೆ ಬಿಕ್ಕನಹಳ್ಳಿ ರಸ್ತೆಯ ಬಳಿ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ, ಬೈಕ್ ಹಾಗೂ ಯುವಕನ ದೇಹ ಸಂಪೂರ್ಣ ಸುಟ್ಟು ಕರಕಲಾಗಿರುವುದು ಪತ್ತೆಯಾಗಿತ್ತು. ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್‌ಪಿ ವೆಂಕಟೇಶ್ ಪ್ರಸನ್ನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಕೋ ತಂಡ ಹಾಗೂ ಶ್ವಾನದಳವೂ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸಿದೆ.

ಮೃತ ವಂಶಿ ಕೃಷ್ಣ ಎಲೆಕ್ಟ್ರಾನಿಕ್ ಸಿಟಿಯ ಪಿಜಿಯೊಂದರಲ್ಲಿ ವಾಸವಾಗಿದ್ದ. ಎನ್‌ಟಿಟಿಎಫ್ ಕಾಲೇಜಿನಲ್ಲಿ ಡಿಪ್ಲೋಮಾ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದ ಆತ, ಬಳಿಕ ಖಾಸಗಿ ಕಂಪನಿಯಲ್ಲಿ ಒಂದು ವರ್ಷ ಕೆಲಸ ಮಾಡಿದ್ದರ. ಕಳೆದ ನಾಲ್ಕೈದು ವರ್ಷಗಳಿಂದ ಉದ್ಯೋಗದಲ್ಲಿರಲಿಲ್ಲ ಎಂದು ತಿಳಿದುಬಂದಿದೆ.

ಘಟನೆ ನಡೆದ ದಿನ ಮಧ್ಯಾಹ್ನ ಸುಮಾರು 3:40ಕ್ಕೆ ವಂಶಿ ಕೃಷ್ಣ ಪಿಜಿಯಿಂದ ಬೈಕ್‌ನಲ್ಲಿ ಹೊರಟಿದ್ದ. ಆಂಧ್ರಪ್ರದೇಶದಿಂದ ಬರುತ್ತಿದ್ದ ಸ್ನೇಹಿತ ಭಾನು ಪ್ರಕಾಶ್ ಅವರನ್ನು ಕರೆತರಲು ಸರ್ಜಾಪುರಕ್ಕೆ ತೆರಳಿದ್ದ. ದಾರಿಯಲ್ಲೇ ಸ್ನೇಹಿತ ಪ್ರವೀಣ್‌ಗೆ ಕರೆ ಮಾಡಿ ರಾತ್ರಿ ಊಟಕ್ಕೆ ಬರುವಂತೆ ತಿಳಿಸಿದ್ದ. ಆದರೆ, ಸಂಜೆ ಸುಮಾರು 4:40ಕ್ಕೆ ಭಾನು ಪ್ರಕಾಶ್ ಕರೆ ಮಾಡಿದಾಗ ವಂಶಿ ಕೃಷ್ಣನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಕೆಲವೇ ಸಮಯದಲ್ಲಿ ಬಿಕ್ಕನಹಳ್ಳಿ ರಸ್ತೆಯಲ್ಲಿ ಬೈಕ್ ಜೊತೆಗೆ ಸುಟ್ಟ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ.

ಬೈಕ್‌ನ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಪೊಲೀಸರು ಮೃತನ ಸಹೋದರ ಶಿವಕೃಷ್ಣನನ್ನು ಸಂಪರ್ಕಿಸಿದ್ದಾರೆ. ಬಳಿಕ ಕುಟುಂಬಸ್ಥರು ಹಾಗೂ ಸ್ನೇಹಿತರು ಸ್ಥಳಕ್ಕೆ ಬಂದು ಮೃತದೇಹವನ್ನು ಗುರುತಿಸಿದ್ದಾರೆ.

ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಇನ್ಸ್ಪೆಕ್ಟರ್ ಮಹೇಂದ್ರ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಮೃತನ ಮೊಬೈಲ್ ಕರೆಗಳ ವಿವರ, ಸಿಸಿಟಿವಿ ದೃಶ್ಯಗಳು ಹಾಗೂ ಇತರ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲಿಸಿ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಇದು ಆತ್ಮಹತ್ಯೆಯಲ್ಲ, ವಂಶಿ ಕೃಷ್ಣನನ್ನು ಕೊಲೆ ಮಾಡಿ ನಂತರ ಬೆಂಕಿ ಹಚ್ಚಿದ್ದಾರೆ. ಅವನಿಗೆ ಯಾರೊಂದಿಗೂ ದ್ವೇಷ ಇರಲಿಲ್ಲ. ಯಾವುದೇ ಪ್ರೇಮ ಸಂಬಂಧವೂ ಇರಲಿಲ್ಲ. ಆತ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಮೃತನ ಕುಟುಂಬಸ್ಥರು ಆಗ್ರಹಿಸಿದ್ದಾರೆ. ವಂಶಿ ಕೃಷ್ಣನ ಸಾವಿನ ಹಿಂದೆ ನಿಜಕ್ಕೂ ಏನಾಗಿದೆ? ಬೈಕ್ ಮತ್ತು ಮೃತದೇಹಕ್ಕೆ ಬೆಂಕಿ ಹಚ್ಚಿದ್ದು ಯಾರು? ಈ ಎಲ್ಲ ಪ್ರಶ್ನೆಗಳಿಗೆ ಪೊಲೀಸರ ತನಿಖೆಯ ಬಳಿಕವೇ ಸ್ಪಷ್ಟ ಉತ್ತರ ಸಿಗಬೇಕಿದೆ.


Spread the love

About Laxminews 24x7

Check Also

ಮರದ ರೆಂಬೆ ಬಿದ್ದು ಎರಡು ಕಾರುಗಳು ಜಖಂ – ತಪ್ಪಿದ ಭಾರೀ ಅನಾಹುತ

Spread the loveಬೆಂಗಳೂರು: ರಸ್ತೆ ಪಕ್ಕದಲ್ಲಿದ್ದ ಬೃಹತ್‌ ಮರದ ರೆಂಬೆಯೊಂದು ಬಿದ್ದು ಎರಡು ಕಾರು ಹಾಗೂ ಒಂದು ಸ್ಕೂಟಿ ಜಖಂಗೊಂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ