ರಾಮನಗರ: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಕಾಂಗ್ರೆಸ್ ಸರ್ಕಾರ ವ್ಯವಸ್ಥಿತವಾಗಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅಕ್ರಮಗಳ ವಿರುದ್ಧ ಚುನಾವಣಾ ಆಯೋಗಕ್ಕೆ ವಿಡಿಯೋ ಸಾಕ್ಷ್ಯ ಹಾಗೂ ದಾಖಲೆ ಸಮೇತ ದೂರು ನೀಡುವುದಾಗಿ ತಿಳಿಸಿದ್ದಾರೆ.
ಅಕ್ರಮವಾಗಿ ಹೆಸರು ಸೇರ್ಪಡೆ
ರಾಜ್ಯದ ಹಲವು ಭಾಗಗಳಿಂದ ತಮಗೆ ಅಕ್ರಮದ ಬಗ್ಗೆ ಮಾಹಿತಿ ಬರುತ್ತಿದೆ, ಕಾಂಗ್ರೆಸ್ ಪಕ್ಷವು ತನ್ನ ಮತದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಅಕ್ರಮವಾಗಿ ಹೆಸರುಗಳನ್ನು ಸೇರಿಸುತ್ತಿದೆ. ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಮತ್ತು ಪ್ರಿಯಾಂಕ್ ಖರ್ಗೆ (Priyank Kharge) ಅವರು ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನೋಡಲಿ ಎಂದು ಕುಟುಕಿದ್ದರೆ.
ವೇದಿಕೆ ಮೇಲೆ ಒಂದು ಹೇಳಿ, ಕಾರ್ಯರೂಪದಲ್ಲಿ ಮತ್ತೊಂದು ಮಾಡುವ ಈ ಲಜ್ಜೆಗೆಟ್ಟ ಸರ್ಕಾರದ ನಿಜವಾದ ಬಂಡವಾಳ ಸದ್ಯದಲ್ಲೇ ಹೊರಬರಲಿದೆ. ಪಾಪ, ರಾಹುಲ್ ಗಾಂಧಿ ಅವರು ದೊಡ್ಡದಾಗಿ ಭಾಷಣ ಮಾಡುತ್ತಾರಲ್ಲ, ಮೊದಲು ಇಲ್ಲಿ ಬಂದು ಏನಾಗುತ್ತಿದೆ ಎಂದು ನೋಡಲಿ. ಸಿಎಂ ತಮ್ಮ ಮನೆಯಲ್ಲೇ ಕೂತು, ಡಿಸಿ ಕರೆಸಿ ಎಸ್‌ಐಆರ್ ನಡೆಸಿದ್ರಲ್ಲ, ಅದುವೇ ಈ ಅಕ್ರಮದ ಮೊದಲ ಪೂಜೆ. ಈ ಪರಿಷ್ಕರಣೆಯಲ್ಲಿ ಯಾವ ರೀತಿ ಅಕ್ರಮ ಎಸಗಬಹುದು ಎಂಬುದನ್ನು ತಮ್ಮ ಮನೆಯಿಂದಲೇ ಶುರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿರುವವರು ಎಸ್‌ಐಆರ್ ಅನ್ನೇ ಓವರ್‌ಲುಕ್ ಮಾಡುವಂತಹ ಬಂಡರು. ಹಿಂದೆ ಪಶ್ಚಿಮ ಬಂಗಾಳದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಬೇರೆ ರಾಜ್ಯಗಳ ಅಧಿಕಾರಿಗಳನ್ನು ಕಳಿಸಿ ಎಸ್‌ಐಆರ್ ಮಾಡಿಸಲಾಗಿತ್ತು. ಈಗ ಕರ್ನಾಟಕದಲ್ಲೂ ಅಂತಹದೇ ಅನಿವಾರ್ಯತೆ ಸೃಷ್ಟಿಯಾಗಿದೆ. ಬೇರೆ ರಾಜ್ಯದ ಅಧಿಕಾರಿಗಳಿಂದ ಇಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಮನಗರ ಜಿಲ್ಲೆಯಿಂದ ಕುಮಾರಸ್ವಾಮಿ ಮತ್ತು ದೇವೇಗೌಡರ ಕುಟುಂಬವನ್ನ ಓಡಿಸಿದ್ದೇವೆ, ಇಲ್ಲಿ ಅವರಿಗೇನು ಕೆಲಸ ಅಂತಾವ್ರೆ, ನನ್ನ ಭೂಮಿ ಮತ್ತು ವೋಟ್ ಇರುವುದು ಇದೇ ರಾಮನಗರ ಜಿಲ್ಲೆಯಲ್ಲಿ. ವಿರೋಧಿಗಳು ಇಲ್ಲೇ ಹುಟ್ಟಿರಬಹುದು, ನಾನು ಇಲ್ಲಿ ಹುಟ್ಟದೇ ಇರಬಹುದು. ಆದರೆ ನನಗೆ ರಾಜಕೀಯವಾಗಿ ಜನ್ಮ ನೀಡಿದ ಜಿಲ್ಲೆ ಇದು. ನಮ್ಮನ್ನು ಇಲ್ಲಿಂದ ಎಲ್ಲೂ ಕಳಿಸಲು ಸಾಧ್ಯವಿಲ್ಲ. ಕಾಲಚಕ್ರ ಸುತ್ತುತ್ತದೆ. ಈಗ ನಮ್ಮ ಕೆಲಸ ಪ್ರಾರಂಭವಾಗಿದೆ. ಕಾರ್ಯಕರ್ತರ ಜೊತೆಗೂಡಿ ಇಲ್ಲೇ ಕೆಲಸ ಆರಂಭಿಸಿದ್ದೇನೆ. ಇವರ ಬಂಡವಾಳ ತೆಗೆಯಲೆಂದೇ ನಾನು ಇನ್ನು ಬದುಕಿದ್ದೇನೆ ಎಂದು ಕಿಡಿಕಾರಿದ್ದಾರೆ.
Laxmi News 24×7