ಕೋಲಾರ: ಚುನಾವಣಾ ಆಯೋಗದ ಮಹತ್ವದ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಕೋಲಾರ ನಗರದಲ್ಲಿ ಭರದಿಂದ ಸಾಗುತ್ತಿದ್ದು ಸಮುದಾಯ ಭವನಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಪ್ರಕ್ರಿಯೆ ನಡೆಸುತ್ತಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಬೂತ್ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುವ ಬದಲು ಹೊಸದೊಂದು ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಂಡಿದ್ದಾರೆ. ಬಡಾವಣೆಗಳ ಒಂದೆಡೆ ಕುಳಿತು ಸಾರ್ವಜನಿಕರನ್ನು ತಾವಿದ್ದ ಜಾಗಕ್ಕೆ ಕರೆಸಿಕೊಂಡು ಅರ್ಜಿ ಭರ್ತಿ ಮಾಡುವ ಕೆಲಸವನ್ನು ಸಿಬ್ಬಂದಿ ಮಾಡುತ್ತಿದ್ದಾರೆ.
ಕೋಲಾರ ನಗರದ ಬಹುತೇಕ ಬಡಾವಣೆಗಳಲ್ಲಿ ಕಳೆದ ಎರಡು ದಿನಗಳಿಂದ ಈ ವಿಶೇಷ ಸರ್ವೆ ಕಾರ್ಯ ನಡೆಯುತ್ತಿದೆ. ನಿಯಮಗಳ ಪ್ರಕಾರ ಸಿಬ್ಬಂದಿಯೇ ಸಾರ್ವಜನಿಕರ ಮನೆ ಬಾಗಿಲಿಗೆ ಹೋಗಬೇಕಿದ್ದರೂ, ಅದಕ್ಕೆ ಪರ್ಯಾಯವಾಗಿ ಬಡಾವಣೆಯ ಪ್ರಮುಖ ಜಾಗಗಳಾದ ಸ್ಥಳೀಯ ಶಾಲೆಗಳು, ಸಮುದಾಯ ಭವನಗಳು, ಅರಳಿ ಕಟ್ಟೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಕುಳಿತು ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದಾರೆ.
ಕೋಲಾರ ನಗರದ ಕುರುಬರ ಪೇಟೆ ಬಡಾವಣೆಯಲ್ಲಿಯೂ ಕಳೆದ ಎರಡು ದಿನಗಳಿಂದ ಇದೇ ಮಾದರಿಯಲ್ಲಿ ಸಮೀಕ್ಷಾ ಕಾರ್ಯ ಮುಂದುವರಿದಿದೆ. ಅಂಗನವಾಡಿ ಕೇಂದ್ರಗಳ ಬಳಿ ಟೇಬಲ್ ಹಾಕಿಕೊಂಡಿರುವ ಬಿಎಲ್‌ಒಗಳು, ಸ್ಥಳೀಯ ನಾಗರಿಕರನ್ನು ಅಲ್ಲಿಗೇ ಕರೆಸಿಕೊಂಡು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ ಅರ್ಜಿಗಳನ್ನು ಭರ್ತಿ ಮಾಡಿಸಿಕೊಳ್ಳುತ್ತಿದ್ದಾರೆ.
Laxmi News 24×7