Breaking News

ಹನಿಮೂನ್ ಹಂತಕಿ ಸೋನಮ್‌ಗೆ ಬಿಗ್ ರಿಲೀಫ್ – ಬೇಲ್ ರದ್ದಿಗೆ ಸುಪ್ರೀಂ ನಕಾರ

Spread the love

ನವದೆಹಲಿ: ಹನಿಮೂನ್‌ಗೆ ಹೋದಾಗ ಪತಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಹಂತಕಿ ಸೋನಮ್ ರಘುವಂಶಿಗೆ ನೀಡಿದ್ದ ಜಾಮೀನು ರದ್ದಿಗೆ ಮೇಘಾಲಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಇದೇ ವೇಳೆ ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಮೇಘಾಲಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಶೀಲ್ ನಾಗು ಅವರಿದ್ದ ಪೀಠವು, ಸೋನಂಗೆ ನೀಡಿದ ಜಾಮೀನು ಆದೇಶಕ್ಕೆ ತಡೆ ನೀಡುವ ಬಗ್ಗೆ ಒಲವು ತೋರಿಸಿತ್ತು. ಆದರೆ ಆರೋಪಿ ಈಗಾಗಲೇ ಜಾಮೀನಿನ ಮೇಲೆ ಹೊರಗಿರುವುದರಿಂದ ಮತ್ತು ಈ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ವಿಚಾರಣೆಯ ವೇಳೆ ನಿರ್ಧಾರವಾಗಬೇಕಿರುವುದರಿಂದ, ಹೈಕೋರ್ಟ್  ಆದೇಶವನ್ನು ಹಿಂಪಡೆಯಲು ನ್ಯಾಯಾಲಯ ನಿರಾಕರಿಸಿದೆ. ಆದರೆ ಪ್ರಕರಣದ ಜಾಮೀನು ಅರ್ಜಿಯನ್ನು ವಿವರವಾಗಿ ಪರಿಶೀಲಿಸಲು ನ್ಯಾಯಾಲಯ ಒಪ್ಪಿಗೆ ನೀಡಿದೆ.

ಈ ವೇಳೆ ಮೇಘಾಲಯ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಈ ಹಿಂದೆ ಸೋನಂ, ಬಂಧನದ ಸಮಯದಲ್ಲಿ ಸರಿಯಾದ ಕಾರಣ ತಿಳಿಸಿರಲಿಲ್ಲ ಎಂದು ಆರೋಪಿಸಿ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಕೋರ್ಟ್ ತಿರಸ್ಕರಿಸಿತ್ತು. ಆದರೆ ಅದಾದ ಬಳಿಕ ಪೊಲೀಸರು ದಾಖಲೆಗಳನ್ನು ಉಲ್ಲೇಖಿಸುವಾಗ ಸಣ್ಣದೊಂದು ತಾಂತ್ರಿಕ ತಪ್ಪು ನಡೆದಿತ್ತು. ಆ ಒಂದು ಸಣ್ಣ ತಾಂತ್ರಿಕ ತಪ್ಪನ್ನೇ ಆಧಾರವಾಗಿಟ್ಟುಕೊಂಡು ಹೈಕೋರ್ಟ್ ಜಾಮೀನು ನೀಡಿದೆ ಎಂದು ವಾದ ಮಂಡಿಸಿದರು.

ಸೋನಂ ಈಗಾಗಲೇ ಒಂದಿಷ್ಟು ಸಮಯ ಜೈಲು ಶಿಕ್ಷೆ ಅನುಭವಿಸಿರುವುದನ್ನು ಪರಿಗಣಿಸಿದ ಕೋರ್ಟ್, ಅಪರಾಧ ಎಷ್ಟೇ ಘೋರವಾಗಿದ್ದರೂ, ಜಾಮೀನು ನೀಡುವುದು ನಿಯಮ, ಜೈಲಿಗೆ ಕಳುಹಿಸುವುದು ಕೊನೆಯ ಆಯ್ಕೆ ಎಂಬ ತತ್ವವನ್ನು ಪಾಲಿಸಬೇಕಾಗುತ್ತದೆ. ಇದೇ ವೇಳೆ ಹೈಕೋರ್ಟ್ ಈ ಪ್ರಕರಣವನ್ನು ನಿರ್ವಹಿಸಿದ ರೀತಿಯ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಮುಂದಿನ ವಿಚಾರಣೆ ಜು.9ಕ್ಕೆ ನಿಗದಿಪಡಿಸಿದೆ.

ಹೈಕೋರ್ಟ್ ಅರ್ಜಿ ವಜಾಗೊಳಿಸಿದ್ದು ಯಾಕೆ?
ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಮೇಘಾಲಯ ಸರ್ಕಾರ, ಹನಿಮೂನ್‌ಗೆ ಹೋಗಿದ್ದ ಉದ್ಯಮಿ ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಅವರ ಪತ್ನಿ ಸೋನಂ ರಘುವಂಶಿ ಪ್ರಮುಖ ಆರೋಪಿಯಾಗಿದ್ದಾರೆ. ಆದರೂ ವಿಚಾರಣಾ ನ್ಯಾಯಾಲಯ ಸೋನಂಗೆ ನೀಡಿದ್ದ ಜಾಮೀನನ್ನು ಮೇಘಾಲಯ ಹೈಕೋರ್ಟ್ ಎತ್ತಿಹಿಡಿದಿತ್ತು. ವಿಚಾರಣೆ ವೇಳೆ, ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ, ಪೊಲೀಸರು ಅಂತಿಮ ದಾಖಲೆಗಳನ್ನು ಸಿದ್ಧಪಡಿಸುವಾಗ ಯಾವುದೇ ವಿವೇಚನೆ ಬಳಸಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದರು. ಬಂಧನದ ವಾರಂಟ್‌ನಲ್ಲಿ ಸೋನಂ ಮೇಲಿರುವ ನೈಜ ಆರೋಪಗಳು ಅಥವಾ ಸೆಕ್ಷನ್‌ಗಳನ್ನು ಸರಿಯಾಗಿ ಉಲ್ಲೇಖಿಸದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಹೇಳಿ ಸರ್ಕಾರದ ಅರ್ಜಿಯನ್ನು ವಜಾಗೊಳಿಸಿದ್ದರು.

ಮಧ್ಯಪ್ರದೇಶದ ಇಂದೋರ್ ನಿವಾಸಿಯಾದ ಸೋನಂ ರಘುವಂಶಿಯನ್ನು ತನ್ನ ಪತಿ ರಾಜಾ ರಘುವಂಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಜೂನ್‌ನಲ್ಲಿ ಬಂಧಿಸಲಾಗಿತ್ತು. 2025ರ ಮೇ 23ರಂದು ಮೇಘಾಲಯದ ಸೋಹ್ರಾ ಪ್ರದೇಶಕ್ಕೆ ಹನಿಮೂನ್‌ಗೆ ಹೋಗಿದ್ದ ಈ ದಂಪತಿ ನಾಪತ್ತೆಯಾಗಿದ್ದರು. ತದನಂತರ ಜೂನ್ 2ರಂದು ರಾಜಾ ರಘುವಂಶಿ ಅವರ ಮೃತದೇಹ ಆಳವಾದ ಕಂದಕದಲ್ಲಿ ಪತ್ತೆಯಾಗಿತ್ತು. ಆರ್ಥಿಕ ಲಾಭಕ್ಕಾಗಿ ಸೋನಂ ಬಾಡಿಗೆ ಹಂತಕರೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ಮೇಘಾಲಯ ಪೊಲೀಸರು ಆರೋಪಿಸಿದ್ದಾರೆ. 


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ