ಬೆಂಗಳೂರು: ಆರ್ಎಸ್ಎಸ್ ನೋಂದಣಿ ವಿವಾದಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬರೆದಿರುವ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ನೀಡದಿರಲು ಸಂಘದ ಮುಖಂಡರು ನಿರ್ಧರಿಸಿದ್ದಾರೆ.
ಈ ಕುರಿತು ಇಂದು ನಡೆದ ಆರ್ಎಸ್ಎಸ್ ಬೈಠಕ್ನಲ್ಲಿ ಬಿಜೆಪಿ ನಾಯಕರಿಗೂ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆರ್ಎಸ್ಎಸ್ ನೋಂದಣಿ ವಿಚಾರಕ್ಕೆ ಸಂಬಂಧಿಸಿದಂತೆ ಸರಸಂಘಚಾಲಕ ಮೋಹನ್ ಭಾಗವತ್ ಈಗಾಗಲೇ ಹಲವು ಬಾರಿ ಸ್ಪಷ್ಟನೆ ನೀಡಿದ್ದಾರೆ. ಕೇರಳದಲ್ಲಿಯೂ ಈ ಕುರಿತು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕರ್ನಾಟಕದಲ್ಲೂ ಈ ವಿಷಯದ ಬಗ್ಗೆ ಈ ಹಿಂದೆ ಮಾತನಾಡಲಾಗಿದೆ ಎಂದು ಸಂಘದ ಮುಖಂಡರು ಸಭೆಯಲ್ಲಿ ಉಲ್ಲೇಖಿಸಿದ್ದಾರೆ.
ನೂರು ವರ್ಷಗಳಿಂದ ಸಂಘದ ಕುರಿತು ಇಂತಹ ಪ್ರಶ್ನೆಗಳು ಕೇಳಿಬರುತ್ತಲೇ ಇವೆ. ಈ ವಿಚಾರವನ್ನು ಮುಂದುವರಿಸಿಕೊಂಡು ಹೋಗುವ ಅವಶ್ಯಕತೆ ಇಲ್ಲ ಎಂಬ ಅಭಿಪ್ರಾಯವನ್ನೂ ಸಭೆಯಲ್ಲಿ ವ್ಯಕ್ತಪಡಿಸಲಾಗಿದೆ.
ಪ್ರಿಯಾಂಕ್ ಖರ್ಗೆ ಅವರು ಕೇಳಿರುವ ಪ್ರಶ್ನೆಗಳು ರಾಜಕೀಯ ಉದ್ದೇಶದಿಂದಲೇ ಕೇಳಿರುವುದು ಸ್ಪಷ್ಟ. ಈ ಹಂತದಲ್ಲಿ ಪ್ರತಿಕ್ರಿಯೆ ನೀಡಿದರೆ ವಿವಾದ ಮತ್ತಷ್ಟು ಜೀವಂತವಾಗುವ ಸಾಧ್ಯತೆ ಇದೆ. ಆದ್ದರಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿರುವುದೇ ಸೂಕ್ತ ಎಂದು ಸಂಘದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ಸರ್ಕಾರ ಅಥವಾ ಸಂಬಂಧಪಟ್ಟವರು ಕಾನೂನುಬದ್ಧವಾಗಿ ಮುಂದಿನ ಕ್ರಮ ಕೈಗೊಂಡರೆ ಆಗ ಅಗತ್ಯವಿರುವ ಉತ್ತರ ನೀಡಲಾಗುವುದು. ಅಲ್ಲಿಯವರೆಗೆ ಈ ವಿಚಾರದ ಬಗ್ಗೆ ಯಾರೂ ಅನಗತ್ಯವಾಗಿ ಮಾತನಾಡಬಾರದು ಎಂದು ಬಿಜೆಪಿ ನಾಯಕರಿಗೆ ಸಂಘದ ಮುಖಂಡರು ಸೂಚನೆ ನೀಡಿದ್ದಾರೆ.
Laxmi News 24×7