Breaking News

ಶಿವಶಂಕರಪ್ಪ ಸಾಹುಕಾರ್ ತಮ್ಮ ಪುತ್ರಿಯರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿ, ಸ್ವಜನಪಕ್ಷಪಾತದ ಆರೋಪ

Spread the love

ನವದೆಹಲಿ: ಕರ್ನಾಟಕ ಲೋಕಸೇವಾ ಆಯೋಗ  ಅಧ್ಯಕ್ಷರು ಅಧಿಕಾರ ದುರುಪಯೋಗ ಪಡಿಸಿಕೊಂಡ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿದ್ದು, ಸಮಗ್ರ ತನಿಖೆ ಆಗಬೇಕೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮುಖ್ಯಮಂತ್ರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

KPSC ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಅವರು ಅಧಿಕಾರ ದುರ್ಬಳಕೆ ಮತ್ತು ಸ್ವಜನಪಕ್ಷಪಾತ ಎಸಗಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ. ಕೈಗಾರಿಕಾ ವಿಸ್ತರಣಾಧಿಕಾರಿ  ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮ ನಡೆದಿರುವ ಕುರಿತು KPSC ಕಾರ್ಯದರ್ಶಿ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಿದ್ದಾರೆ. ಈ ಕುರಿತು ಪಾರದರ್ಶಕ ತನಿಖೆ ನಡೆಸಬೇಕು ಎಂದು ಸಚಿವ ಜೋಶಿ ಸಿಎಂಗೆ ಒತ್ತಾಯಿಸಿದ್ದಾರೆ.

*ನ್ಯಾಯ ತತ್ವಕ್ಕೆ ವಿರುದ್ಧ ನಿಲುವು:*

ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆ ನೇಮಕಾತಿ ಪ್ರಕ್ರಿಯೆಯಲ್ಲಿ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿಯರೇ ಅಭ್ಯರ್ಥಿಗಳಾಗಿದ್ದರು. ತಾವೇ ಆಯೋಗದ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ಪುತ್ರಿಯರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಲ್ಲದೆ, ಇತ್ತೀಚೆಗೆ ಹೊರಬಿದ್ದ ಆಯ್ಕೆ ನಡಾವಳಿಗಳಿಗೂ ಸಹಿ ಹಾಕಿದ್ದಾರೆ. ಇದು ಸಹಜವಾಗಿಯೇ ನ್ಯಾಯ ತತ್ವಕ್ಕೆ (Principles of Natural Justice) ಸಂಪೂರ್ಣ ವಿರುದ್ಧ ನಿಲುವಾಗಿದೆ. ಇದರಲ್ಲಿ ನೈತಿಕತೆಯ ಉಲ್ಲಂಘನೆಯಾಗಿದೆ ಎಂದು ಪ್ರಲ್ಹಾದ ಜೋಶಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

*ಮೀಸಲಾತಿ ಮತ್ತು ಆದಾಯ ನಿಯಮ ಉಲ್ಲಂಘನೆ:*

ಅಧ್ಯಕ್ಷರ ಪುತ್ರಿಯರ ಪೈಕಿ ಒಬ್ಬರು ಪಡೆದಿರುವ ಮೀಸಲಾತಿ ಅರ್ಹತೆ ಬಗ್ಗೆಯೂ ಸಂಶಯಗಳು ವ್ಯಕ್ತವಾಗಿವೆ. ನಿಗದಿಪಡಿಸಿದ ಆದಾಯದ ಮಾನದಂಡಗಳನ್ನು (Income Criteria) ಪೂರೈಸದೇ ಇರುವುದು ಒಂದೆಡೆಯಾದರೆ, ಸುಳ್ಳು ಮಾಹಿತಿ ನೀಡಿ ಮೀಸಲಾತಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದು ಅರ್ಹ ಮತ್ತು ಪ್ರಾಮಾಣಿಕ ಕೆಪಿಎಸ್‌ಸಿ ಆಕಾಂಕ್ಷಿಗಳಿಗೆ ಬಗೆದ ದ್ರೋಹ. ಇಡೀ ನೇಮಕಾತಿ ವ್ಯವಸ್ಥೆಗೇ ಅಂಟಿದ ಕಪ್ಪುಚುಕ್ಕೆಯಾಗಿದೆ ಎಂದು ಸಚಿವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

*ಪಾರದರ್ಶಕ ತನಿಖೆಗೆ ಸಿಎಂಗೆ ಮನವಿ:*

KPSC ಅಧ್ಯಕ್ಷರಿಂದ ಬಹಿರಂಗವಾಗಿ ನಡೆದಿರುವ ಈ ಸ್ವಜನಪಕ್ಷಪಾತ ಮತ್ತು ಅಧಿಕಾರ ದುರುಪಯೋಗ ಕುರಿತು ಮುಖ್ಯಮಂತ್ರಿ ಗಮನ ಸೆಳೆದಿರುವ ಜೋಶಿ, ಪಾರದರ್ಶಕತೆ ಕಾಯ್ದುಕೊಳ್ಳಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

*ರಾಜ್ಯಪಾಲರಿಗೂ ಪತ್ರ ಬರೆದು ಮನವಿ:*

ಈ ಪ್ರಕರಣ ಕೆಪಿಎಸ್‌ಸಿ ಸಂಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ. ಅಲ್ಲದೇ, ಅರ್ಹತೆ ಆಧಾರಿತ ವ್ಯವಸ್ಥೆಯನ್ನೇ ಪ್ರಶ್ನಿಸುವಂತಾಗಿದೆ. ಹೀಗಾಗಿ ಈ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಸಮಗ್ರ ತನಿಖೆಗೊಳಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ರಾಜ್ಯಪಾಲರಿಗೂ ಪತ್ರ ಬರೆದು ವಿನಂತಿಸಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗದ ಪಾವಿತ್ರ್ಯತೆ ಕಾಪಾಡಲು ಮತ್ತು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಒದಗಿಸಲು ಈ ತನಿಖೆ ಅತ್ಯಗತ್ಯವಾಗಿದೆ ಎಂದು ಸಚಿವರು ಅಭಿಪ್ರಾಯಿಸಿದ್ದು, ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೂ ಕಾರಣವಾಗಿದೆ.


Spread the love

About Laxminews 24x7

Check Also

30 ದಿನ ಜೈಲಿಗೆ ಹೋದರೆ ಪ್ರಧಾನಿ, ಸಿಎಂ, ಸಚಿವರು ವಜಾ – ಮಸೂದೆಗೆ ಸಿದ್ಧತೆ

Spread the loveನವದೆಹಲಿ: ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಸಚಿವರು ಸತತ 30 ದಿನಗಳ ಕಾಲ ಬಂಧನದಲ್ಲಿದ್ದರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ