Breaking News

15 ದಿನಗಳಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ: ಎಂಬಿ ಪಾಟೀಲ್

Spread the love

ಬಾಗಲಕೋಟೆ: ಮುಂದಿನ ಹದಿನೈದು ದಿನಗಳ ಒಳಗಾಗಿ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್  ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ನಾವು ತಾತ್ಕಾಲಿಕ ಮಾತ್ರ. ಮುಂದಿನ 15 ದಿನಗಳಲ್ಲಿ ಸಂಪುಟ ವಿಸ್ತರಣೆಯಾಗಲಿದ್ದು, ಆ ಸಂದರ್ಭದಲ್ಲಿ ನಿಮ್ಮ ಜಿಲ್ಲೆಯವರಿಗೇ ಸಚಿವ ಸ್ಥಾನ ಸಿಗಲಿದೆ ಎಂದು ಭರವಸೆ ನೀಡಿದರು.

ಇದೇ ವೇಳೆ ಜಿಲ್ಲೆಗೆ ಸಚಿವ ಸ್ಥಾನದ ಪ್ರಾತಿನಿಧ್ಯ ಸಿಗದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇಷ್ಟು ದಿನಗಳ ಕಾಲ ನಿಮ್ಮ ಜಿಲ್ಲೆಯವರು ಸಚಿವ ಸಂಪುಟದಲ್ಲಿ ಇರಲಿಲ್ಲವೇ ಎಂದು ಮರುಪ್ರಶ್ನಿಸಿದರು. ಸಂಪುಟ ವಿಸ್ತರಣೆಯ ಸಂಪೂರ್ಣ ನಿರ್ಧಾರ ಕಾಂಗ್ರೆಸ್ ಹೈಕಮಾಂಡ್‌ಗೆ ಬಿಟ್ಟಿದ್ದು. ಈ ವಿಷಯದಲ್ಲಿ ಹೈಕಮಾಂಡ್  ತೀರ್ಮಾನವೇ ಅಂತಿಮ, ನನ್ನ ಕೈಯಲ್ಲಿ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯ ಬರ ಪರಿಸ್ಥಿತಿ ಮತ್ತು ವಿಪತ್ತು ನಿರ್ವಹಣೆ ಕುರಿತು ಮಾತನಾಡಿದ ಸಚಿವರು, ಕುಡಿಯುವ ನೀರಿನ ನಿರ್ವಹಣೆಗೆ ಹಣದ ಕೊರತೆ ಇಲ್ಲವೇ ಇಲ್ಲ. ಅಗತ್ಯ ಬಿದ್ದರೆ ಉಳಿದೆಲ್ಲ ಯೋಜನೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸುತ್ತೇವೆ. ಆದರೆ ಜನರಿಗೆ ಕುಡಿಯುವ ನೀರು ಒದಗಿಸುವುದು ನಮ್ಮ ಮೊದಲ ಕರ್ತವ್ಯ ಎಂದು ಕಟ್ಟುನಿಟ್ಟಾಗಿ ಹೇಳಿದರು.

ಈಗಾಗಲೇ ಬಾಗಲಕೋಟೆ ಜಿಲ್ಲಾದ್ಯಂತ ಬರ ನಿರ್ವಹಣೆಗಾಗಿ 12 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಹೆಚ್ಚುವರಿ ನಿಧಿ ಕೂಡ ಸಿದ್ಧವಾಗಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ರೈತರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರಾದ ಡಿ.ಕೆ. ಶಿವಕುಮಾರ್ ಸೇರಿದಂತೆ ನಾವೆಲ್ಲರೂ ಒಟ್ಟಾಗಿ ಕೆಲಸ ಮುಗಿಸುತ್ತೇವೆ ಎಂದು ಎಂ.ಬಿ. ಪಾಟೀಲ್ ಭರವಸೆ ನೀಡಿದರು.

ಇದಕ್ಕೂ ಮುನ್ನ ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಸಚಿವ ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಸಭೆ ಜರುಗಿತು. ಸಭೆಯಲ್ಲಿ ಶಾಸಕರಾದ ಜೆ.ಟಿ. ಪಾಟೀಲ್, ಸಿದ್ದು ಸವದಿ, ಉಮೇಶ್ ಮೇಟಿ ಹಾಗೂ ರಾಜ್ಯಸಭಾ ಸದಸ್ಯ ನಾರಾಯಣಸಾ ಬಂಡಗೆ ಸೇರಿದಂತೆ ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.

ಬರಗಾಲದ ಸಿದ್ಧತೆ, ನೀರಿನ ಲಭ್ಯತೆ ಮತ್ತು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ಆಣೆಕಟ್ಟುಗಳ ಕ್ರಸ್ಟ್ ಗೇಟ್‌ಗಳ ಸ್ಥಿತಿಗತಿ ಬಗ್ಗೆ ವಿಚಾರಿಸಿದರು. ತುಕ್ಕು ಹಿಡಿದಿರುವ ಕ್ರಸ್ಟ್ ಗೇಟ್‌ಗಳನ್ನು ತಕ್ಷಣವೇ ಬದಲಾಯಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅಧಿಕಾರಿಗಳಿಗೆ ತರಾಟೆ
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ನೀರು ಸರಬರಾಜಿಗೆ ವಿದ್ಯುತ್ ಸಂಪರ್ಕ ಕಲ್ಪಿಸದ ಹಿನ್ನೆಲೆಯಲ್ಲಿ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಮಹತ್ವದ ವಿಪತ್ತು ನಿರ್ವಹಣಾ ಸಭೆಗೆ ಹೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ (ಇಇ) ಗೈರಾಗಿದ್ದಕ್ಕೆ ಸಚಿವರು ಕೆಂಡಾಮಂಡಲರಾದರು.

ಸಭೆಯಲ್ಲಿದ್ದ ಹೆಸ್ಕಾಂ ಸುಪರಿಂಟೆಂಡಿಂಗ್ ಇಂಜಿನಿಯರ್ (ಎಸ್.ಇ) ಸಿ.ಬಿ. ಯಂಕಂಚಿ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ನಿಮ್ಮ ಅಧಿಕಾರಿ ಯಾಕೆ ಸಭೆಗೆ ಬಂದಿಲ್ಲ? ಒಬ್ಬರ ಮೇಲೆ ಒಬ್ಬರು ಜವಾಬ್ದಾರಿ ತಳ್ಳಿದರೆ ನಡೆಯುವುದಿಲ್ಲ. ಒಂದೂವರೆ ತಿಂಗಳಾದರೂ ಇನ್ನೂ ಆರ್‌ಆರ್ ನಂಬರ್ ಕೊಟ್ಟಿಲ್ಲ. ಒಂದೂವರೆ ವರ್ಷದಿಂದ ಹೀಗೆಯೇ ಕೆಲಸ ಮಾಡುತ್ತಿದ್ದೀರಾ ಎಂದು ಗರಂ ಆದರು. “ಇದು ನಿಮಗೆ ಅಂತಿಮ ಎಚ್ಚರಿಕೆ, ಇಲ್ಲದಿದ್ದರೆ ನಿಮ್ಮ ಅಮಾನತಿ ಪತ್ರ ಬರೆಯಬೇಕಾಗುತ್ತದೆ ಎಂದು ಸಚಿವರು ಖಡಕ್ ವಾರ್ನಿಂಗ್ ನೀಡಿದರು.


Spread the love

About Laxminews 24x7

Check Also

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ

Spread the loveಬೆಂಗಳೂರು: ರಾಮ ಮಂದಿರ ದೇಣಿಗೆ ಹಗರಣವನ್ನು ಬಿಜೆಪಿ ಮುಚ್ಚಿ ಹಾಕೋಕೆ ಪ್ರಯತ್ನ ಮಾಡ್ತಿದೆ ಅಂತ ಗೃಹ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ