ಹಾವೇರಿ: ಮುಂಗಾರು ಮಳೆ ಸಮರ್ಪಕವಾಗಿ ಆಗದೇ ಇರುವುದರಿಂದ ಬಿತ್ತನೆ ಮಾಡಿದ ಮೆಕ್ಕೆಜೋಳದ ಬೀಜ ಮೊಳಕೆ ಒಡೆಯದೆ ಹಾಳಾಗಿದ್ದಕ್ಕೆ ಬೇಸತ್ತು ರೈತನೋರ್ವ 11 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳದ ಬೆಳೆಯನ್ನು ನಾಶಪಡಿಸಿದ್ದಾರೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಶಿಡೇನೂರ ಗ್ರಾಮದ ರೈತ ಕಿರಣ ಗಡಿಗೋಳ, ತನ್ನ ಸ್ವಂತ ಜಮೀನಿನ ಜೊತೆಗೆ ಬೇರೆ ರೈತರಿಂದ ಎಕರೆಗೆ ಹತ್ತು ಸಾವಿರ ರೂಪಾಯಿಯಂತೆ ಹನ್ನೊಂದು ಎಕರೆ ಜಮೀನನ್ನು ಲಾವಣಿ ಹಾಕಿಕೊಂಡು ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಮೆಕ್ಕೆಜೋಳ ಬಿತ್ತನೆ ಬೀಜ, ಡಿಸೇಲ್ ಖರ್ಚು ಸೇರಿದಂತೆ ಬರೋಬ್ಬರಿ ಎರಡು ಲಕ್ಷ ರೂ. ಖರ್ಚು ಮಾಡಿದ್ದರು. ಆದರೆ ಬಿತ್ತನೆ ನಂತರ ವರುಣದೇವ ಕಣ್ತೆರೆಯಲಿಲ್ಲ. ರೈತರು ದಿನನಿತ್ಯ ಬಾರೋ ಬಾರೋ ಮಳೆರಾಯ ಅಂತಾ ಗೋಗರೆದರೂ ಮಳೆರಾಯ ರೈತರ ಮೇಲೆ ಕರುಣೆ ತೋರಲಿಲ್ಲ. ಹೀಗಾಗಿ ರೈತ ಕಿರಣ ಗಡಿಗೋಳ ಅವರು ಮಳೆಯಾಗದ್ದಕ್ಕೆ ಮೆಕ್ಕೆಜೋಳದ ಬೆಳೆ ಬರುವುದಿಲ್ಲ ಎಂಬುದನ್ನರಿತು ಟ್ರ‍್ಯಾಕ್ಟರ್‌ನಿಂದ ಹನ್ನೊಂದು ಎಕರೆಯಲ್ಲಿನ ಬೆಳೆ ನಾಶ ಮಾಡಿದ್ದಾರೆ.
ಪ್ರಸಕ್ತ ವರ್ಷ ಮುಂಗಾರು ಉತ್ತಮವಾಗಿ ಆಗಬಹುದು ಎಂದು ಕಿರಣ ಅವರು ಹನ್ನೊಂದು ಎಕರೆ ಜಮೀನು ಲಾವಣಿಗೆ ಪಡೆದು ಕೃಷಿ ಮಾಡುತ್ತಿದ್ದರು. ಆದರೆ ಬಿತ್ತನೆ ನಂತರ ಮಳೆ ಬಾರದ್ದಕ್ಕೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಶೇಕಡಾ 30ರಷ್ಟು ಮಾತ್ರ ಬೆಳೆ ಬೆಳೆದಿತ್ತು. ಹೀಗಾಗಿ ಕಿರಣ ಅವರು ಬೆಳೆ ನಾಶ ಮಾಡಿದ್ದಾರೆ. ಇದು ಕೇವಲ ಒಬ್ಬ ರೈತರ ಕತೆಯಲ್ಲ, ಜಿಲ್ಲೆಯ ಬಹುತೇಕ ರೈತರ ಕತೆ ಇದೆ ಆಗಿದೆ. ಹೀಗಾಗಿ ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಪ್ರತಿ ಎಕರೆಗೆ 25,000 ರೂ.ನಂತೆ ಹಾನಿಗೆ ಒಳಗಾದ ರೈತರಿಗೆ ಪರಿಹಾರ ನೀಡಬೇಕು. ಇಡೀ ಹಾವೇರಿ ಜಿಲ್ಲೆಯನ್ನು ಬರಗಾಲ ಎಂದು ಘೋಷಿಸುವಂತೆ ಒತ್ತಾಯಿಸಿದ್ದಾರೆ.
Laxmi News 24×7