ಮೈಸೂರು: ನಿನ್ನೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ನಾಲ್ವರು ಅಡ್ಡ ಮತದಾನ ಮಾಡಿದ್ದಾರೆ. ಅವರು ಯಾರು ಅಂತಲೂ ಗೊತ್ತಿದೆ. ಈಗಾಗಲೇ ಅವರು ಪಕ್ಷ ಬಿಡುವ ಚರ್ಚೆಯನ್ನೂ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಹೇಳಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಷತ್ ಚುನಾವಣೆ ಸಂಬಂಧ ಹಲವು ಸ್ಫೋಟಕ ವಿಚಾರಗಳನ್ನ ಹಂಚಿಕೊಂಡರು.
ಯಾರು ಅಡ್ಡ ಮತದಾನ ಮಾಡಿದ್ದಾರೆ, ಯಾವ್ಯಾವ ಕಾರಣಕ್ಕೆ ಮಾಡಿದ್ದಾರೆ ಅನ್ನೋದ್ರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇದೆ. ಅವರು ಅಡ್ಡ ಮತದಾನ ಮಾಡ್ತಾರೆ ಅನ್ನೋದರ ಬಗ್ಗೆ ಮೊದಲೇ ನಿರೀಕ್ಷೆಯಿತ್ತು. ಆದ್ದರಿಂದ ನನಗಿದು ಯಾವುದೇ ಅಚ್ಚರಿ, ಆಘಾತ ಉಂಟುಮಾಡಿಲ್ಲ. ಈಗಲೂ ಅಂಥವರು ಯಾವ ರೀತಿ ನಡೆದುಕೊಳ್ಳಬಹುದು ಅನ್ನೋದನ್ನ ತಿಳಿಯೋಕೆ ಅಭ್ಯರ್ಥಿಯನ್ನ ನಿಲ್ಲಿಸಿದ್ವಿ ಎಂದು ತಿಳಿಸಿದ್ದಾರೆ.
ಅಡ್ಡ ಮತದಾನ ಮಾಡಿದವರು ಪಕ್ಷ ಬಿಡುವ ಹಂತದವರೆಗೂ ಅವರೆಲ್ಲ ಚರ್ಚೆ ಮಾಡಿದ್ದಾರೆ ಎಂದರಲ್ಲದೇ, ಹೋಗುವವರೆಲ್ಲಾ ಹೋಗಲಿ, ನನಗೆ ಪಕ್ಷ ಕಟ್ಟುವುದು ಗೊತ್ತಿದೆ. ಯುವಕರನ್ನ (Gen Z) ಕರೆ ತಂದು ಪಕ್ಷ ಕಟ್ಟುತ್ತೇನೆ. ಹೊಸ ಮುಖಗಳಿಗೆ ಆದ್ಯತೆ ನೀಡಬೇಕೆಂದು ತೀರ್ಮಾನ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ನಮಗೆ ಅಭ್ಯರ್ಥಿ ನಿಲ್ಲಿಸುವ ಯೋಚನೆಯೇ ಇರಲಿಲ್ಲ. ಏಕೆಂದ್ರೆ ನಮಗೆ ನಿಜವಾದ ಅಗ್ನಿಪರೀಕ್ಷೆ ಇರೋದು 2028ರ ಚುನಾವಣೆ. ಆದ್ರೆ ನಮ್ಮಲ್ಲಿನ ಕೆಲ ಶಾಸಕರು, ಅಭ್ಯರ್ಥಿ ಹಾಕದಿದ್ದರೆ ತಪ್ಪು ಸಂದೇಶ ಹೋಗುತ್ತೆ. ಚುನಾವಣೆಯಲ್ಲಿ ಸೋಲು-ಗೆಲುವು ಇದ್ದಿದ್ದೇ, ಹಾಗಾಗಿ ಅಭ್ಯರ್ಥಿಯನ್ನ ಹಾಕಲೇಬೇಕೆಂದು ಕೆಲವು ಶಾಸಕರು ಒತ್ತಾಯ ಮಾಡಿದ್ರು. ಅದಕ್ಕೆ ನನಗೆ ಬೇಕಾಗಿದ್ದು 17 ಮತಗಳು ಯಾವುದೇ ಕಾರಣಕ್ಕೂ ಒಡೆದು ಹೋಗೋದಕ್ಕೆ ಅವಕಾಶ ಕೊಡಬೇಡಿ ಅಂತ ಹೇಳಿದ್ದೆ. ಏಕೆಂದ್ರೆ ಈ ಹಿಂದೆ ನನಗೆ ಅನುಭವ ಆಗಿದೆ ಅಂತಲೂ ಹೇಳಿದ್ದೆ. ಅದಕ್ಕೆ ಇಲ್ಲ ಇಲ್ಲ ಪರೀಕ್ಷೆ ಮಾಡಲೇಬೇಕು, ಯಾರ‍್ಯಾರು ಯಾವ ರೀತಿ ಇದ್ದಾರೆ? ಗೌರವ ಯಾರಿಟ್ಟಿದ್ದಾರೆ? ಹಿತಶತ್ರುಗಳು ಯಾರಿದ್ದಾರೆ ಅನ್ನೋದನ್ನ ತಿಳಿಯೋದಕ್ಕೆ ಅಭ್ಯರ್ಥಿ ನಿಲ್ಲಿಸಬೇಕೆಂದು ಸಭೆಯಲ್ಲಿ ತೀರ್ಮಾನ ಮಾಡಿದ್ವಿ ಎಂದು ವಿವರಿಸಿದ್ದಾರೆ.
ನಿನ್ನೆಯ ಫಲಿತಾಂಶ ನನಗೆ ಇನ್ನೋಂದು ಅನುಭವ ಕೊಟ್ಟಿದೆ. ಯಾರನ್ನೂ ದೂಷಿಸಲ್ಲ, ಆದ್ರೆ ಅತಿಯಾಗಿ ನಂಬಿಕೆ ಇಡುವುದು ಸೂಕ್ತ ಅಲ್ಲ ಅಂತ ಕೆಲವರು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇನ್ನೂ ಶಾಸಕ ಜಿ.ಟಿ ದೇವೇಗೌಡರ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರ ಹೆಸರನ್ನ ನನ್ನ ಮುಂದೆ ಪ್ರಸ್ತಾಪಿಸಬೇಡಿ. ಅದೆಲ್ಲಾ ಮುಗಿದು ಹೋದ ಕಥೆ. ಅವರು ಒಂದು ಕಾಲಲ್ಲ ಎರಡು ಕಾಲನ್ನೂ ಹೊರಗಡೆ ಇಟ್ಟಿದ್ದಾರೆ. ಅವರ ಬಗ್ಗೆ ನಾನು ಈ ಹಿಂದೆ ಏನು ಹೇಳಿದೆನೋ ಅದೇ ಅಂತಿಮ. ಜಿ.ಟಿ.ಡಿ ವಿಚಾರದಲ್ಲಿ ನನ್ನ ಸ್ಟ್ಯಾಂಡ್ ಬಹಳ ಕ್ಲಿಯರ್ ಇದೆ. ದೊಡ್ಡ ಗೌಡರು ಹೇಳಿದರು ಕೂಡ ಪಕ್ಷದ ಹಿತದೃಷ್ಟಿಯಿಂದ ನನ್ನ ಸ್ಟ್ಯಾಂಡ್ ಬದಲಾಯಿಸಿಕೊಳ್ಳುವುದಿಲ್ಲ. ಈ ಬಾರಿಯ ಟಿಕೆಟ್ ಅಂತಿಮ ನಿರ್ಣಯ ಮಾಡುವುದು ನಾನೇ. ಇದರ ಬಗ್ಗೆ ಯಾವ ಗೊಂದಲ ಬೇಡ. ಜಿ.ಟಿ ದೇವೇಗೌಡರು ಯಾವ್ಯಾವಾಗ ಯಾವ ರೀತಿಯ ಆಟ ಕಟ್ಟಿದ್ದಾರೆ ಎಂಬುದು ನನಗೆ ಗೊತ್ತಿದೆ. ಅವರ ಎಲ್ಲಾ ಪೂರ್ವಪರ ಗೊತ್ತಿದ್ದೆ ಈ ಬಾರಿ ಕಠಿಣ ನಿರ್ಧಾರಕ್ಕೆ ಬಂದಿದ್ದೇನೆ. ಅವರ ಬಗ್ಗೆ ನನ್ನ ಬಳಿ ಚರ್ಚೆ ಮಾಡಲೇಬೇಡಿ. ದೊಡ್ಡ ಗೌಡರಿಗೆ ಜಿ.ಟಿ.ಡಿ ಮೇಲೆ ಪ್ರೀತಿ ವ್ಯಾಮೋಹ ಇರುವುದು ಸತ್ಯ. ಆ ವ್ಯಾಮೋಹವನ್ನೇ ಜಿ.ಟಿ ಡಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ ಎಂದು ಕಟು ಸಂದೇಶ ರವಾನಿಸಿದ್ದಾರೆ.
Laxmi News 24×7