Breaking News

ರಾಮ ಮಂದಿರ ದೇಣಿಗೆ ಕಳ್ಳತನ – ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ರೂ ಕ್ರಮ ನಿಶ್ಚಿತ: ಸಿಎಂ ಯೋಗಿ ಎಚ್ಚರಿಕೆ

Spread the love

ಲಕ್ನೋ: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ಅಪರಾಧಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ, ಅವರನ್ನು ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಚ್ಚರಿಕೆ ನೀಡಿದ್ದಾರೆ.

ಅಯೋಧ್ಯೆಯ ರಾಮ ಮಂದಿರಕ್ಕೆ ಭಕ್ತರು ನೀಡಿರುವ ಕೋಟ್ಯಂತರ ರೂ. ದೇಣಿಗೆ ಹಣ ಕಳ್ಳತನದ ಬಗ್ಗೆ ಮಾತನಾಡಿ, ಪ್ರಭು ಶ್ರೀರಾಮನ ಆದರ್ಶಗಳಾದ ಘನತೆ ಮತ್ತು ತಾಳ್ಮೆಯನ್ನು ಎಲ್ಲರೂ ಪಾಲಿಸಬೇಕು. ಜೊತೆಗೆ ಅಯೋಧ್ಯೆ ಅಥವಾ ರಾಮ ಜನ್ಮಭೂಮಿ ಮಂದಿರದ ಹೆಸರಿಗೆ ಮಸಿ ಬಳಿಯಲು ಯತ್ನಿಸುತ್ತಿರುವವರ ಮಾತುಗಳಿಗೆ ಯಾರೂ ಮರುಳಾಗಬಾರದು. ಈ ದೇಣಿಗೆ ಅಕ್ರಮಕ್ಕೆ ಸಂಬಂಧಿಸಿದಂತೆ ಯಾರ ಬಳಿಯಾದರೂ ಲಿಖಿತ ದಾಖಲೆಗಳು ಅಥವಾ ಸಾಕ್ಷ್ಯಗಳಿದ್ದರೆ ತಕ್ಷಣವೇ ವಿಶೇಷ ತನಿಖಾ ತಂಡಕ್ಕೆ ಕೊಡಿ. ಮಂದಿರದ ಟ್ರಸ್ಟ್ ನೀಡಿದ ವಿನಂತಿಯ ಮೇರೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಎಸ್‌ಐಟಿ ಎಲ್ಲಾ ಸತ್ಯಾಂಶಗಳನ್ನ ಶೀಘ್ರದಲ್ಲೇ ಬಯಲಿಗೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆ ವಿಷಯದಲ್ಲಿ ಕಾಂಗ್ರೆಸ್ ಪಕ್ಷವು ದ್ವಿಮುಖ ನೀತಿ ಪ್ರದರ್ಶಿಸುತ್ತಿದೆ. ಯಾವ ಕಾಂಗ್ರೆಸ್ ಪಕ್ಷ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮಂದಿರ ನಿರ್ಮಾಣವಾಗದಂತೆ ತಡೆಯಲು ಪ್ರಯತ್ನಿಸಿತ್ತೋ, ಅದೇ ಕಾಂಗ್ರೆಸ್ ಇಂದು ಅಯೋಧ್ಯೆಯ ಬಗ್ಗೆ ತೀವ್ರ ಕಳಕಳಿ ಇರುವಂತೆ ನಟಿಸುತ್ತಿದೆ. ಕಾಂಗ್ರೆಸ್ ಪಕ್ಷ ರಾಮ ಮಂದಿರ ನಿರ್ಮಾಣವನ್ನು ನ್ಯಾಯಾಲಯದಲ್ಲೂ ವಿರೋಧಿಸಿತ್ತು. ಅಷ್ಟೇ ಅಲ್ಲದೇ, ಸುಪ್ರೀಂ ಕೋರ್ಟ್‌ನಲ್ಲಿ ಶ್ರೀರಾಮನೇ ಇರಲಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸಿತ್ತು. ಆದರೆ ಇಂದು ಅದೇ ಕಾಂಗ್ರೆಸ್ ರಾಮನ ಭಕ್ತರಿಗೆ ಅವಮಾನವಾಗಿದೆ ಎಂದು ನಾಟಕವಾಡುತ್ತಿದೆ ಎಂದು ಲೇವಡಿ ಮಾಡಿದ್ದಾರೆ.

ಇನ್ನೊಂದು ಕಡೆ ಸಮಾಜವಾದಿ ಪಕ್ಷ ರಾಮನ ಭಕ್ತರಿಗೆ ಅವಮಾನವಾಗಿದೆ ಎಂದು ಕಣ್ಣೀರು ಸುರಿಸುತ್ತಿದೆ. ಈ ಹಿಂದೆ ಇದೇ ಸಮಾಜವಾದಿ ಪಕ್ಷದವರು ಕರಸೇವಕರ ಮೇಲೆ ಗುಂಡು ಹಾರಿಸಲು ಆದೇಶ ನೀಡಿದ್ದರು. ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದವರ ಮೇಲೆ ಲಾಠಿ ಪ್ರಹಾರ ನಡೆಸಿದ್ದರು. ಇಂತಹವರು ಇಂದು ನಮಗೆ ಬಂದು ಪಾಠ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಮ ಮಂದಿರಕ್ಕೆ ಭಕ್ತರು ನೀಡಿದ ಕೋಟ್ಯಂತರ ರೂ. ದೇಣಿಗೆ ಹಣ ದುರುಪಯೋಗವಾಗಿದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಈ ಬೆನ್ನಲ್ಲೇ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಈ ವಿಚಾರದಲ್ಲಿ ನ್ಯಾಯಾಲಯವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದ್ದರು.

ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿರುವ ಮಂದಿರದ ಟ್ರಸ್ಟ್, ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿತ್ತು. ಇದರ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರವು ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಿದೆ. ಪ್ರಸ್ತುತ ಎಸ್‌ಐಟಿ ತನಿಖೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ತನಿಖಾ ತಂಡವು ಈಗಾಗಲೇ ಹಲವು ಜನರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದೆ.


Spread the love

About Laxminews 24x7

Check Also

ಕುಟುಂಬ ಸಮೇತರಾಗಿ ಬೆಳ್ಳಂಬೆಳಗ್ಗೆ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದ ಡಿಕೆಶಿ

Spread the love ಬೆಂಗಳೂರು: ಮೊದಲಿನಿಂದಲೂ ದೇವರಲ್ಲಿ ಅಪಾರ ಭಕ್ತಿ, ನಂಬಿಕೆ ಹೊಂದಿರುವ ಸಿಎಂ ಡಿ.ಕೆ ಶಿವಕುಮಾರ್‌  ಅವರು ರಾಜ್ಯದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ