ದಾವಣಗೆರೆ ವಿಷ ಸೇವಿಸಿ ಹರಿಹರ ತಾಲೂಕಿನ ಕೊಕ್ಕನೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಜಯಪ್ಪ(54) ಆತ್ಮಹತ್ಯೆ ಪ್ರಕರಣ ಸಂಬಂಧ ಐವರು ಶಿಕ್ಷಕರು, ಬಿಸಿಯೂಟದ ನಾಲ್ವರು ಅಡುಗೆ ಸಿಬ್ಬಂದಿ, ಸಿಆರ್ಪಿ, ಬಿಆರ್ಪಿ ಸೇರಿದಂತೆ 10 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮಾನಸಿಕ ಹಿಂಸೆ, ಕಿರುಕುಳ ಹಾಗೂ ಜಾತಿನಿಂದನೆ ಆರೋಪದಡಿ ಸಹ ಶಿಕ್ಷಕರಾದ ಶ್ರೀಕಾಂತಚಾರಿ, ವೆಂಕಟೇಶ್, ರಂಜನಿ, ಚೇತನಾ,ಮಹಾಂತೇಶ್ ಗೌಳಿ, ಅಡುಗೆ ಸಹಾಯಕರಾದ ಸುಮಾ, ಚೆನ್ನಮ್ಮ, ರೂಪಾ, ವಿಜಯಮ್ಮ ಸೇರಿದಂತೆ 10 ಜನರ ವಿರುದ್ಧ ಮಲೆಬೆನ್ನೂರು ಠಾಣೆಗೆ ಜಯಪ್ಪ ಪತ್ನಿ ಅಂಜನಮ್ಮ ದೂರು ನೀಡಿದ್ದರು.
ಕಳೆದ 10 ತಿಂಗಳಿಂದ ಕೊಕ್ಕನೂರು ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪತಿ ಜಯಪ್ಪಗೆ ನಿತ್ಯವೂ ಹಿಂಸೆ ನೀಡಲಾಗುತ್ತಿತ್ತು. ನಾವು ಪರಿಶಿಷ್ಟ ಜಾತಿಗೆ ಸೇರಿದ್ದರಿಂದ ಜಾತಿ ನಿಂದನೆ ಮಾಡುತ್ತಿದ್ದರು. ಈ ವಿಚಾರವನ್ನು ಹತ್ತಾರು ಸಲ ಪತಿ ಜಯಪ್ಪ ತನಗೆ ಹೇಳಿದ್ದರು. ಇವರು ನೀಡಿದ ಮಾನಸಿಕ ಹಿಂಸೆಯೇ ತನ್ನ ಪತಿ ಆತ್ಮಹತ್ಯೆಗೆ ಕಾರಣ ಎಂದು ದೂರಿನಲ್ಲಿ ಅಂಜಿನಮ್ಮ ಉಲ್ಲೇಖಿಸಿದ್ದರು.
ಕೊಕ್ಕನೂರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ನಡುವೆ ಒಳಜಗಳದ ಆರೋಪ ಕೇಳಿಬಂದಿತ್ತು. ಸಹಶಿಕ್ಷಕರು, ಅಡುಗೆ ಸಹಾಯಕರು ಮತ್ತು ಮುಖ್ಯ ಶಿಕ್ಷಕನ ನಡುವೆ ಮನಸ್ಥಾಪದ ಹಿನ್ನೆಲೆ ಎಸ್ಡಿಎಂಸಿ ಹಾಗೂ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಸಂಧಾನ ಸಭೆ ನಡೆದಿತ್ತು. ಸಭೆ ಸೇರಿದ್ದ ವೇಳೆ ಶಾಲಾ ಶೌಚಾಲಯಕ್ಕೆ ಹೋಗಿ ಮುಖ್ಯ ಶಿಕ್ಷಕ ಜಯಪ್ಪ ವಿಷ ಸೇವಿಸಿದ್ದರು. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದರು. ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.
Laxmi News 24×7