Breaking News

ಹುಟ್ಟೂರಿನ ಮಗನನ್ನು ಮನದುಂಬಿ ಹರಸಿದ ಕನಕಪುರ ಜನತೆ – ದಾರಿಯುದ್ದಕ್ಕೂ ಸಿಎಂಗೆ ಬೃಹತ್ ಸೇಬಿನ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮ

Spread the love

ರಾಮನಗರ: ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್  ಅವರಿಗೆ ಅಭಿಮಾನಿಗಳಿಂದ ಅಭೂತಪೂರ್ವ ಸ್ವಾಗತ ದೊರೆಯಿತು. ಅಭಿಮಾನಿಗಳ ಹರ್ಷೋದ್ಗಾರದಲ್ಲಿ ಡಿ.ಕೆ. ಶಿವಕುಮಾರ್ ಮಿಂದೆದ್ದರು. ‘ಡಿ.ಕೆ, ಡಿ.ಕೆ’ ಎನ್ನುವ ಘೋಷಣೆ ಮುಗಿಲು ಮುಟ್ಟುತ್ತಿದ್ದಂತೆ ಮುಖ್ಯಮಂತ್ರಿ ಡಿಕೆಶಿ ಭಾವುಕರಾದರು.

ನಿಮ್ಮ ಪ್ರೀತಿಗೆ ಆಭಾರಿ. ನಿಮ್ಮಿಂದ ನಾನು ವಿಧಾನಸೌಧದ ಮೂರನೇ ಮಹಡಿಯಲ್ಲಿದ್ದೇನೆ. ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ. ನಿಮಗೆಲ್ಲರಿಗೂ ಕೋಟಿ, ಕೋಟಿ ವಂದನೆಗಳು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿನಯಪೂರ್ವಕವಾಗಿ ಹೇಳಿದರು.

ನಿಮ್ಮ ಪಾಲಿಗೆ ನಾನು ಸಿಎಂ ಅಲ್ಲ, ಸೇವಕ. ನನ್ನ ಕೊನೆಯುಸಿರು ಇರುವವರೆಗೂ ನಿಮ್ಮ ಮನೆ ಮಗನಾಗಿ ಸೇವೆ ಮಾಡುವೆ. ಸ್ವಂತ ಮಗನಂತೆ ನನ್ನನ್ನು ಬೆಳೆಸಿದ್ದೀರಿ. ನನ್ನ ಕ್ಷೇತ್ರದ ಪ್ರತಿಯೊಬ್ಬರಿಗೂ ಸಾಷ್ಟಾಂಗ ನಮಸ್ಕಾರಗಳು. ನಾನು ಈ ಕ್ಷೇತ್ರ ದಾಟಿ ಹೋದಾಗ ಮಾತ್ರ ಮುಖ್ಯಮಂತ್ರಿ. ಇಲ್ಲಿಗೆ ಬಂದಾಗ ನಿಮ್ಮ ಮನೆ ಸೇವಕ ಎನ್ನುವ ಮಾತನ್ನು ಭೇಟಿ ಕೊಟ್ಟ ಪ್ರತಿ ಊರಿನಲ್ಲೂ ಒತ್ತಿ, ಒತ್ತಿ ಹೇಳಿದರು. ನನ್ನ ಶಕ್ತಿ ನೀವೇ, ಬದುಕು ನೀವೇ, ಉಸಿರು ನೀವೇ. ನನ್ನ ಬದುಕಿನ ಕಷ್ಟ ಕಾಲದಲ್ಲಿ ನೀವು ನನಗೆ ನೆರಳಾಗಿದ್ದೀರಿ. ನಿಮ್ಮ ಸೇವಕನಾಗಿ ಮುಂದುವರಿದು, ಋಣ ತೀರಿಸುತ್ತೇನೆ ಎಂದರು.

ಕನಕಪುರ (Kanakapura) ರಸ್ತೆಯ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದಿಂದಲೇ ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನಿಂತಿದ್ದ ಸಾರ್ವಜನಿಕರು ಡಿ.ಕೆ. ಶಿವಕುಮಾರ್ ಅವರಿಗೆ ಜೈಕಾರ ಹಾಕಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ದಾರಿಯುದ್ದಕ್ಕೂ ಶುಭಾಶಯ ಕೋರುವ ಬ್ಯಾನರ್ ಗಳು, ಫ್ಲೆಕ್ಸ್ಗಳು ಕಾಂಗ್ರೆಸ್ ಪಕ್ಷದ ಬಾವುಟಗಳು ರಾರಾಜಿಸಿದವು.

ಒಣ-ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಹಾರ:
ನೂತನ ಸಿಎಂ ಅವರಿಗೆ ಯಾರ ದೃಷ್ಟಿಯೂ ತಾಕದಿರಲಿ ಎಂದು ಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿ ಪೋಣಿಸಿ ಮಾಡಿದ್ದ ಬೃಹತ್ ಹಾರವನ್ನು ಹಾರೋಹಳ್ಳಿಯ ಜನರು ಹಾಕಿದ್ದು ವಿಶೇಷವಾಗಿತ್ತು. ಸುಮಾರು 50 ಕೆ.ಜಿ ಒಣ ಮೆಣಸಿನಕಾಯಿ 70 ಕೆಜಿಗೂ ಹೆಚ್ಚು ಹಸಿಮೆಣಸಿನಕಾಯಿ ಮತ್ತು 50 ಕೆ.ಜಿಗೂ ಹೆಚ್ಚು ಬೆಳ್ಳುಳ್ಳಿ ಬಳಸಲಾಗಿತ್ತು. ಕ್ರೇನ್ ಮೂಲಕ ಬೃಹತ್ ಸೇಬಿನ ಹಾರವನ್ನು ಹಾಕಿ ಅಭಿಮಾನಿಗಳು ಸಂಭ್ರಮಿಸಿದರು.

500 ಕೆಜಿಗೂ ಹೆಚ್ಚು ತೂಕದ ಸೇಬಿನ ಹಾರಗಳು:
ಕಗ್ಗಲೀಪುರ, ತುಂಗಣಿ, ನಾರಾಯಣಪುರಗಳಲ್ಲಿ ಅಭಿಮಾನಿಗಳು ಸುಮಾರು 500 ಕೆಜಿಗೂ ಹೆಚ್ಚು ಸೇಬು ಬಳಸಿ ಬೃಹತ್ ಹಾರಗಳನ್ನು ಮಾಡಿಸಿ ಡಿ.ಕೆ. ಶಿವಕುಮಾರ್ ಅವರ ಮೇಲಿನ ಅಭಿಮಾನ ಮೆರೆದರು. ತುಂಗಣಿಯಲ್ಲಿ ಎರಡು ಸೇಬಿನ ಹಾರಗಳು ಇದ್ದಿದ್ದು ವಿಶೇಷವಾಗಿತ್ತು. ಹೆರಿಂದ್ಯಾಪನಹಳ್ಳಿಯಲ್ಲಿ ಮಾಡಿದ್ದ ಸೇಬಿನ ಹಾರ 30 ಅಡಿಗೂ ಹೆಚ್ಚು ಉದ್ದವಾಗಿತ್ತು.

ಸಿಎಂ ಸ್ವಾಗತಕ್ಕೆ ಜಾನಪದ ಮೆರುಗು; ಪೂರ್ಣಕುಂಭ ಸ್ವಾಗತ
ನಾರಾಯಣಪುರದಲ್ಲಿ ಪೂಜಾಕುಣಿತ ಕಲಾವಿದರು ಸ್ವಾಗತಿಸಿದರೆ, ಕೊಳಗೊಂಡನಹಳ್ಳಿಯಲ್ಲಿ ನಂದಿಧ್ವಜ, ಪಟ ಕುಣಿತ, ನಂದಿಧ್ವಜ ಹೊತ್ತ ಕಲಾವಿದರು ಸ್ವಾಗತಿಸಿದರು. ಪ್ರತಿ ಊರಿನಲ್ಲೂ ತಮಟೆ, ನಗಾರಿ ಸದ್ದು ಮೇಳೈಸಿತ್ತು. ಬೇಕುಪ್ಪೆಯಲ್ಲಿ ಮನೆದೇವರು ಕೆಂಕೇರಮ್ಮನಿಗೆ ಹಾಗೂ ತುಂಗಣಿಯಲ್ಲಿ ಚಾಮುಂಡೇಶ್ವರಿ ದೇವಾಲಯದಲ್ಲಿ ಸಹೋದರ ಡಿ.ಕೆ.ಸುರೇಶ್ ಅವರ ಜೊತೆಗೂಡಿ ಪೂಜೆ ಸಲ್ಲಿಸಿದರು. ಕ್ಷೇತ್ರದ ಗಡಿ ಭಾಗದಲ್ಲಿ ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು.

ಯುವ ಯುಗ ಘೋಷಣೆಗೆ ಸ್ವಕ್ಷೇತ್ರದಲ್ಲೇ ಶಕ್ತಿ:
ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡಾಗ ಕರ್ನಾಟಕದಲ್ಲಿ ಯುವ ಯುಗ ಆರಂಭ ಎಂದು ಯುವಕರನ್ನು ಗಮನದಲ್ಲಿಟ್ಟುಕೊಂಡು ಘೋಷಣೆ ಮಾಡಿದ್ದರು. ಪ್ರತಿ ಊರಿನಲ್ಲೂ ಯುವಕರು ನೀಡಿದ ಕೊಡುಗೆಗೆ ಧನ್ಯವಾದ ತಿಳಿಸಿದರು. ಪ್ರತಿ ಊರಿನಲ್ಲೂ ಯುವಕರೇ ಮುಂದೆ ನಿಂತು ಮುಖ್ಯಮಂತ್ರಿಗಳನ್ನು ಸ್ವಾಗತಿಸಿದರು.

ಕಗ್ಗಲೀಪುರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತಾಡಿದ ಶಿವಕುಮಾರ್ ಅವರು, ನಿಮ್ಮಿಂದ ನಾನು ಇಷ್ಟು ಎತ್ತರಕ್ಕೆ ಬೆಳೆದಿದ್ದೇನೆ. ನಾನು ಚುನಾವಣಾ ಪ್ರಚಾರಕ್ಕೆ ಬರದೇ ಇದ್ದರೂ 1.23 ಲಕ್ಷ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿದ್ದೀರಿ ಎಂದು ಸ್ಮರಣೆ ಮಾಡಿದರು.

ದುಃಖವನ್ನು ದೂರ ಮಾಡುವ ದೇವಿ ದುರ್ಗಾದೇವಿ. ಬೆಂಗಳೂರು ದಕ್ಷಿಣ ಜಿಲ್ಲೆಯ ಮಗನಾಗಿ ಜನರ ಮುಂದೆ ನಿಂತಿದ್ದೇನೆ. ಈ ಕ್ಷೇತ್ರದ ಜನ ನನ್ನ ಪರವಾಗಿ ಪ್ರಾರ್ಥನೆ ಮಾಡಿದ್ದೀರಿ. ನೋವು, ದುಃಖವನ್ನು ಅನುಭವಿಸಿದ್ದೀರಿ. ವಿಧಾನಸೌಧದ ಮೂರನೇ ಮಹಡಿಯಲ್ಲಿ ನಾನು ಕುಳಿತುಕೊಳ್ಳಬೇಕು ಎಂದು ನೀವು ಪ್ರಾರ್ಥನೆ ಮಾಡಿದ್ದರ ಫಲವಾಗಿ ನಾನು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ. ಪ್ರಯತ್ನ ವಿಫಲವಾಗಬಹುದು ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದರು.

ನನಗೆ ಜಾತಿ ಧರ್ಮ ಬೇಧವಿಲ್ಲ, ಎಲ್ಲರ ಮನೆ ಮಗ ನಾನು. 2028 ಕ್ಕೆ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕ್ಷೇತ್ರದ ಜನ ಪ್ರಾರ್ಥನೆ ಮಾಡಬೇಕು. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ನನಗೆ ಆ ಧರ್ಮ ಈ ಧರ್ಮ, ಆ ಜಾತಿ ಈ ಜಾತಿ ಎನ್ನುವ ಬೇದವಿಲ್ಲ. ಹಾರೋಹಳ್ಳಿಯ ಮುದ್ದೆಗೌಡರು, ಅಲಿಸಾಬ್, ಪುಟ್ಟೇಗೌಡರು, ಸತ್ತಾರ್ ಸಾಹೇಬರು ಹೀಗೆ ಅನೇಕರು ನನ್ನನ್ನು ಮನೆ ಮಗನಾಗಿ ಬೆಳೆಸಿದರು. ಪಿಜಿಆರ್ ಸಿಂಧ್ಯಾ ಅವರು ನನ್ನ ಜೊತೆಯಾಗಿ ನಿಂತಿದ್ದಾರೆ. ನನ್ನ ವಿರುದ್ದ ಸ್ಪರ್ಧಿಸಿದ್ದ ನಾರಾಯಣ ಗೌಡರು ಇಂದೂ ನನಗೆ ಬೆಂಬಲವಾಗಿದ್ದಾರೆ ಎಂದು ಹೇಳಿದರು.

ಟಿ.ಬೇಕುಪ್ಪೆಯಲ್ಲಿ ಮಾತನಾಡಿದ ಅವರು, ಮನುಷ್ಯ ಹುಟ್ಟುವಾಗ ನಾಲ್ಕು ಋಣದಲ್ಲಿ ಹುಟ್ಟುತ್ತಾನೆ. ತಂದೆ ತಾಯಿ, ಗುರು, ದೇವರ ಹಾಗೂ ಸಮಾಜ. ನಾನು ನಿಮ್ಮ ಋಣದಲ್ಲಿದ್ದೇನೆ. ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ. ನಿಮ್ಮ ತಾಲೂಕಿನ ಮಗ, ನಿಮ್ಮ ಸೇವಕ. ಈಗ 136 ಸ್ಥಾನಗಳನ್ನು ಗೆಲ್ಲಿಸಿ 2028 ಕ್ಕೆ ಪಕ್ಷವು ಮತ್ತೊಮ್ಮೆ ಅಧಿಕಾರಕ್ಕೆ ಏರುವಂತೆ ಮಾಡುವ ಜವಾಬ್ದಾರಿ ನಿಮ್ಮ ಬಳಿಯಿದೆ. ರಾಮನಗರ ಹಾಗೂ ಹಾರೊಹಳ್ಳಿಯ ಪ್ರತಿ ಬಡವರ ತಲೆಯ ಮೇಲೂ ಸ್ವಂತ ಸೂರು ಇರಬೇಕು ಎಂಬುದು ನನ್ನ ಆಸೆ. ಈ ಆಸೆಯನ್ನು ಆದಷ್ಟು ಬೇಗ ಸಾಕಾರಗೊಳಿಸಲಾಗುವುದು ಎಂದು ಹೇಳಿದರು.

ನಾರಾಯಣಪುರ, ಸಂತೆ ಕೋಡಿಹಳ್ಳಿ, ಹೆರಿಂದ್ಯಾಪನಹಳ್ಳಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ತಿಹಾರ್ ಜೈಲಿನಲ್ಲಿ ಇದ್ದಾಗ ನನ್ನ ಕ್ಷೇತ್ರದ ಜನರು ಕಣ್ಣೀರು ಸುರಿಸಿ ಪ್ರಾರ್ಥನೆ ಮಾಡಿದರು. ಆ ಪ್ರಾರ್ಥನೆ ನನ್ನನ್ನು ಕಾಪಾಡಿದೆ. ನೀವು ನನ್ನ ಪರವಾಗಿ ಕೊರಗಿದ್ದು ನನ್ನ ರಕ್ಷಿಸಿದೆ. ನನಗೆ ಹಣದ, ಅಧಿಕಾರದ ಅವಶ್ಯಕತೆ ಬೇಕಾಗಿಲ್ಲ. ನಿಮ್ಮ ಜೀವನದಲ್ಲಿ ಬದಲಾವಣೆ ಉಂಟಾಗಬೇಕು ಎಂಬುದೇ ನನ್ನ ಧ್ಯೇಯ ಎಂದರು.

ತಾಯಿ ಮನೆಯಲ್ಲಿ ಡಿಕೆಶಿ ಊಟ:
ಕನಕಪುರ ತಾಲೂಕಿನ ಕೋಡಿಹಳ್ಳಿ ನಿವಾಸದಲ್ಲಿ ಡಿಕೆಶಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಕೋಡಿಹಳ್ಳಿಯಲ್ಲಿರುವ ತಾಯಿ ಮನೆಯಲ್ಲಿ ಡಿಕೆಶಿ ಊಟ ಮಾಡಿದ್ದಾರೆ. ಡಿಕೆಶಿಗಾಗಿ ವೆಜ್ ಊಟ ರೆಡಿ ಮಾಡಿಸಲಾಗಿತ್ತು. ಇಡ್ಲಿ, ಮುದ್ದೆ, ಹಿಸುಕಿದ ಬೇಳೆ ಸಾಂಬರ್, ವೆಜ್ ಪಲಾವ್, ಪನ್ನೀರ್ ಚಿಲ್ಲಿ, ಅನ್ನ, ನುಗ್ಗೆಕಾಯಿ ಸಾಂಬಾರ್ ತಯಾರಿಸಲಾಗಿತ್ತು. ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಬಿರಿಯಾನಿ, ಚಿಕನ್ ಚಾಪ್ಸ್, ಅನ್ನ, ಸಾಂಬರ್ ವ್ಯವಸ್ಥೆ ಮಾಡಲಾಗಿತ್ತು. ಊಟದ ವಿರಾಮದ ಬಳಿಕ ಡಿಕೆಶಿ ಮತ್ತೆ ಹೂಕುಂದ ಗ್ರಾಮಕ್ಕೆ ಪ್ರವಾಸ ಬೆಳೆಸಿದ್ದಾರೆ.

ಇನ್ನು ದೊಡ್ಡಾಲಹಳ್ಳಿ ಗ್ರಾಮದಲ್ಲಿ ‘ಡಿಕೆ, ಡಿಕೆ’ ಘೋಷಣೆ ಕೂಗುತ್ತಿದ್ದ ಅಭಿಮಾನಿಗಳಿಗೆ ಡಿಕೆಶಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಎಲ್ಲರೂ ಬಾಯಿ ಮುಚ್ಕೊಂಡು 10 ನಿಮಿಷ ಸುಮ್ಮನೆ ಇರಿ. ಮಹಿಳೆಯರು ಬಂದಿದ್ದಾರೆ, ನನ್ನ ಮಾತು ಕೇಳಿಸಿಕೊಳ್ಳಲು ಅವಕಾಶ ಕೊಡಿ ಎಂದು ಅಭಿಮಾನಿಗಳ ಮೇಲೆ ಡಿಕೆಶಿ ಗರಂ ಆಗಿದ್ದರು. ಸಾತನೂರು ಸರ್ಕಲ್‌ನಲ್ಲಿ ಡಿಕೆಶಿಯನ್ನು ಕಾರ್ಯಕರ್ತರು ಗ್ರ್ಯಾಂಡ್ ವೆಲ್‌ಕಮ್ ಮಾಡಿದ್ದಾರೆ. ಡಿಕೆಶಿಗೆ ವಿವಿಧ ಬಗೆಯ ಅದ್ದೂರಿ ಹಾರಗಳನ್ನು ಕಾರ್ಯಕರ್ತರು ಹಾಕಿದ್ದಾರೆ. ಬೆಲ್ಲದ ಹಾರ, ಪೈನಾಪಲ್ ಹಾರ, ಕೊಬ್ಬರಿ ಹಾರ, ಆರೆಂಜ್ ಹಣ್ಣುಗಳ ಹಾರ ಹಾಕಿ, ಪಟಾಕಿ ಸಿಡಿಸಿ ಅದ್ಧೂರಿ ಸ್ವಾಗತ ಕೋರಿದ್ದಾರೆ.

ಅಜ್ಜಯ್ಯನ ಮಾರ್ಗದರ್ಶನ:
ಸಿಎಂ ರೋಡ್ ಶೋ ನಡೆಸಿದ ವಾಹನದ ಮುಂಭಾಗದಲ್ಲಿ ಅಜ್ಜಯ್ಯನ ಫೋಟೊ ಅಳವಡಿಸಿದ್ದು ವಿಶೇಷವಾಗಿತ್ತು. ವೀರ ಗಂಗಾಧರ ಅಜ್ಜಯ್ಯನ ಮಾರ್ಗದರ್ಶನದಲ್ಲಿ ಮುನ್ನಡೆಯುವ ಸಂದೇಶ ಕೊಟ್ಟರು.

ಬೇಕುಪ್ಪೆ ಗ್ರಾಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ ವೇಳೆ ಅಂಬುಲೆನ್ಸ್ ಬಂದ ಕಾರಣಕ್ಕೆ ಮಧ್ಯದಲ್ಲೇ ಭಾಷಣ ನಿಲ್ಲಿಸಿದ ಮುಖ್ಯಮಂತ್ರಿಯವರು ಜನರಿಗೆ ದಾರಿ ಬಿಡುವಂತೆ ಸೂಚಿಸಿದರು. ಅಂಬುಲೆನ್ಸ್ ಹೋದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.


Spread the love

About Laxminews 24x7

Check Also

ಮೋದಿ ಸರ್ಕಾರ ಜನರು ಹಾಳಾಗಿ ಹೋಗ್ಲಿ ಅಂತಾ ಬೆಲೆ ಜಾಸ್ತಿ ಮಾಡಿದ್ದಾರೆ: ಕೇಂದ್ರದ ವಿರುದ್ಧ ಯತೀಂದ್ರ ಕಿಡಿ

Spread the love ಕಾಳಜಿ ಇಲ್ಲದೆ, ಜನರು ಹಾಳಾಗಿ ಹೋಗ್ಲಿ ಅಂತಾ bjp ಬೆಲೆ ಜಾಸ್ತಿ ಮಾಡಿದ್ದಾರೆ ಎಂದು ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ