ಬೆಂಗಳೂರು: ಕೇಂದ್ರ ಸರ್ಕಾರದ ಉದ್ದೇಶಿತ ‘ಒಂದು ರಾಷ್ಟ್ರ ಒಂದು ಚುನಾವಣೆ’ ಪ್ರಸ್ತಾವನೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಪ್ರಬಲವಾಗಿ ವಿರೋಧಿಸಿದ್ದಾರೆ.
ಇದೊಂದು ಅಧಿಕಾರ ಕೇಂದ್ರೀತ, ರಾಜಕೀಯ ಪ್ರೇರಿತ ಯೋಜನೆಯಾಗಿದ್ದು, ರಾಜ್ಯಗಳನ್ನ ದುರ್ಬಳಗೊಳಿಸುವುದರ ಮೂಲಕ ಒಕ್ಕೂಟ ವ್ಯವಸ್ಥೆಗೆ ತೀವ್ರ ಧಕ್ಕೆ ತರಲಿದೆ. ಇದೊಂದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಅಪಾಯವಿದೆ. ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವವರ ಅನುಕೂಲಕ್ಕೆ ತಕ್ಕಂತೆ ಹೆಣೆಯಲಾಗುತ್ತಿರುವ ಈ ಪ್ರಸ್ತಾವನೆಯನ್ನು ಕೆಪಿಸಿಸಿ ಅಧ್ಯಕ್ಷನಾಗಿ ಹಾಗೂ ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಆಗಿ ಸರಸಗಟಾಗಿ ತಿರಸ್ಕರಿಸುತ್ತೇನೆ ಎಂದು ಸ್ಪಷ್ಟವಾಗಿ ತಿಳಿಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಜಂಟಿ ಸಂಸದೀಯ ಅಧ್ಯಯನ ಸಮಿತಿಯು ಶನಿವಾರ ಆಯೋಜಿಸಿದ್ದ ʻಒಂದು ರಾಷ್ಟ್ರ ಒಂದು ಚುನಾವಣೆʼ ಕುರಿತ ಸಂವಾದದಲ್ಲಿಅಭಿಪ್ರಾಯ ಮಂಡಿಸಿದರು. ಒಂದು ದೇಶ ಒಂದು ಚುನಾವಣೆ ವಿರೋಧಿಸಿ ಕರ್ನಾಟಕ ವಿಧಾನಸಭೆಯು ಈಗಾಗಲೇ ನಿರ್ಣಯವನ್ನೂ ಅಂಗೀಕರಿಸಿದೆ ಎಂದೂ ಹೇಳಿದರು. ಆ ನಿರ್ಣಯವನ್ನೂ ಸಭೆಯಲ್ಲಿ ಓದಿದರು.
ಒಂದೊಮ್ಮೆ ರಾಜಕೀಯ ಅಸ್ಥಿರತೆ, ಅವಿಶ್ವಾಸ, ಬಹುಮತದ ಕೊರತೆಯಿಂದ ಒಂದು ಸರಕಾರ ಅರ್ಧಾವಧಿಯಲ್ಲೇ ಉರುಳಿ ಹೋದರೆ ಆಗ ಏನು ಮಾಡುವುದು? ಇದಕ್ಕೆ ಪರಿಹಾರ ಎಲ್ಲಿದೆ? ಒಂದೊಂದು ರಾಜ್ಯದಲ್ಲಿ ಒಂದೊಂದು ಅವಧಿಗೆ ಚುನಾವಣೆ ನಡೆಯುತ್ತದೆ. ಕರ್ನಾಟಕದಲ್ಲಿ 3 ವರ್ಷಗಳ ಹಿಂದೆ ಆಗಿತ್ತು. ತಮಿಳುನಾಡು, ಕೇರಳದಲ್ಲಿ ಮೊನ್ನೆಯಷ್ಟೇ ಆಗಿದೆ. ಪಂಜಾಬ್, ತೆಲಂಗಾಣದಲ್ಲಿ ಬೇರೆ ಕಾಲದಲ್ಲಿ ಆಗಿದೆ. ವಿವಿಧ ಕಾಲಾವಧಿಯ ಈ ಚುನಾವಣೆಗಳನ್ನ ಸಮೀಕರಿಸುವುದು ಹೇಗೆ? ಎಂದು ಪ್ರಶ್ನಿಸಿದರು.
ಇದು ಕಾರ್ಯಸಾಧು ಯೋಜನೆಯಲ್ಲ, ಪ್ರಾಕ್ಟಿಕಲಿ ಇಂಪಾಸಿಬಲ್ ಎಂದು ಖಚಿತವಾಗಿ ಹೇಳಿದರು. ಇದು ಪ್ರಾದೇಶಿಕ ಪಕ್ಷಗಳು ಹಾಗೂ ಎದುರಾಳಿ ಪಕ್ಷಗಳ ಧ್ವನಿ ಅಡಗಿಸುವ ಹುನ್ನಾರವಾಗಿದೆ. ಈ ಪ್ರಸ್ತಾವನೆ ಬಗ್ಗೆ ಕರ್ನಾಟಕ ಸರಕಾರದ ಸಹಮತವಿಲ್ಲ. ನಮ್ಮ ಪಕ್ಷದ ರಾಷ್ಟ್ರೀಯ ಮುಖಂಡರ ಒಟ್ಟಾರೆ ನಿಲುವಿಗೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
Laxmi News 24×7