ನವದೆಹಲಿ: ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಗುಂಡು ಹಾರಿಸುವುದು, ಗ್ರೆನೇಡ್ ದಾಳಿ ನಡೆಸುವುದು ಮತ್ತು ನಿರ್ದಿಷ್ಟ ವ್ಯಕ್ತಿಗಳ ಹತ್ಯೆಗೆ ಪಿತೂರಿ ನಡೆಸಿದ್ದ ಇಬ್ಬರು ಶಂಕಿತ ಭಯೋತ್ಪಾದಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಶಂಕಿತರು ಪಾಕಿಸ್ತಾನ ಮೂಲದ ದರೋಡೆಕೋರ ಮತ್ತು ಐಎಸ್‌ಐ ಪ್ರಾಕ್ಸಿ ಶಹಜಾದ್ ಭಟ್ಟಿಯ ಆಜ್ಞೆಯ ಮೇರೆಗೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಬಂಧಿತರನ್ನು ರಾಜ್‌ವೀರ್ (21) ಮತ್ತು ವಿವೇಕ್ ಬಂಜಾರಾ (19) ಎಂದು ಗುರುತಿಸಲಾಗಿದೆ.
ಇಬ್ಬರೂ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯವರು. ರಾಜ್‌ವೀರ್ ಡಬ್ರಾ ನಿವಾಸಿ. ಏಪ್ರಿಲ್ 16 ರಂದು ಗ್ವಾಲಿಯರ್‌ನ ಡಬ್ರಾದಿಂದ ವಿವೇಕ್ ಬಂಜಾರಾನನ್ನ ಮೊದಲು ಬಂಧಿಸಲಾಯಿತು. ಅವನ ವಿಚಾರಣೆಯಿಂದ ದೊರೆತ ಮಾಹಿತಿಯ ಆಧಾರದಲ್ಲಿ ಏಪ್ರಿಲ್ 18 ರಂದು ದೆಹಲಿಯ ಸರೈ ಕಾಲೆ ಖಾನ್ ಪ್ರದೇಶದಿಂದ ರಾಜ್‌ವೀರ್‌ನನ್ನ ಬಂಧಿಸಲಾಗಿದೆ.
ಈ ಬಗ್ಗೆ ದೆಹಲಿ ಪೊಲೀಸ್ ( ವಿಶೇಷ ಘಟಕದ ಡೆಪ್ಯೂಟಿ ಕಮಿಷನರ್ ಪ್ರವೀಣ್ ಕುಮಾರ್ ತ್ರಿಪಾಠಿ ಮಾತನಾಡಿ, ಈ ಬಂಧನದಿಂದ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯೋಜಿಸಲಾಗಿದ್ದ ಭವಿಷ್ಯದ ದಾಳಿಗಳನ್ನ ತಡೆಗಟ್ಟಿವೆ. ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕರನ್ನ ಆಕರ್ಷಿಸಿ, ಅವರನ್ನ ದೆಹಲಿ-ಎನ್‌ಸಿಆರ್‌ನಲ್ಲಿ ಗುರಿಯುದ್ದೇಶಿತ ಹಿಂಸಾಕೃತ್ಯಗಳಿಗೆ ಬಳಸುತ್ತಿದ್ದ ಷಹಜಾದ್ ಭಟ್ಟಿ ಮತ್ತು ಐಎಸ್‌ಐ ಸಂಬಂಧಿತ ಹ್ಯಾಂಡ್ಲರ್‌ಗಳ ದೊಡ್ಡ ಷಡ್ಯಂತ್ರವನ್ನ ಈ ಬಂಧನಗಳು ಬಯಲು ಮಾಡಿವೆ ಎಂದು ತಿಳಿಸಿದ್ದಾರೆ.
ಮಾರ್ಚ್ 31 ರಂದು ಗ್ರೆನೇಡ್ ದಾಳಿ ಮತ್ತು ನಿರ್ದಿಷ್ಟ ಹತ್ಯೆಗಳ ಯೋಜನೆಯ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ರಾಜ್‌ವೀರ್ ತನ್ನ ಹ್ಯಾಂಡ್ಲರ್ ಷಹಜಾದ್ ಭಟ್ಟಿಯ ನಿರ್ದೇಶನದ ಮೇರೆಗೆ ದೆಹಲಿ-ಎನ್‌ಸಿಆರ್‌ನಲ್ಲಿ ಒಂದು ಪ್ರಮುಖ ಹೋಟೆಲ್‌ಗೆ ದಾಳಿ ನಡೆಸುವ ತಯಾರಿಯಲ್ಲಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧನದ ವೇಳೆ ರಾಜ್‌ವೀರ್‌ನಿಂದ ಒಂದು ಪಿಸ್ತೂಲ್ ಮತ್ತು ಆರು ಜೀವಂತ ಗುಂಡುಗಳನ್ನು ವಶಪಡಿಸಲಾಗಿದೆ. ಇದರ ಜೊತೆಗೆ ಷಡ್ಯಂತ್ರಕ್ಕೆ ಸಂಬಂಧಿಸಿದ ಆಪರಾಧಿಕ ವೀಡಿಯೊಗಳು ಮತ್ತು ಧ್ವನಿ ಸಂದೇಶಗಳಿರುವ ಎರಡು ಮೊಬೈಲ್ ಫೋನ್‌ಗಳನ್ನು ಸಹ ವಶಪಡಿಸಲಾಗಿದೆ.
ಪೊಲೀಸ್ ಮಾಹಿತಿ ಪ್ರಕಾರ, ರಾಜ್‌ವೀರ್ ಸಾಮಾಜಿಕ ಮಾಧ್ಯಮಗಳ ಮೂಲಕ ಭಟ್ಟಿಯ ನೆಟ್‌ವರ್ಕ್‌ಗೆ ಸಂಪರ್ಕ ಬೆಳೆಸಿದ್ದ ಯುವಕ. ರಾಣಾ ಭಾಯಿ ಎಂಬ ಭಟ್ಟಿಯ ಸಹಯೋಗಿಯಿಂದ ನೇರವಾಗಿ ನಿರ್ವಹಣೆಗೊಳ್ಳುತ್ತಿದ್ದ ರಾಜ್‌ವೀರ್, ಚಲನೆಗಳ ಸಂಘಟನೆ, ಆಯುಧ ಸಂಗ್ರಹ ಮತ್ತು ಯೋಜಿತ ದಾಳಿಗಳಲ್ಲಿ ಕೇಂದ್ರೀಯ ಪಾತ್ರ ವಹಿಸುತ್ತಿದ್ದನು.
ವಿವೇಕ್ ಬಂಜಾರಾ ರಾಜ್‌ವೀರ್ ಮೂಲಕ ನೆಟ್‌ವರ್ಕ್‌ಗೆ ಪರಿಚಯವಾದವನು. ಲಾಜಿಸ್ಟಿಕ್ಸ್ ಮತ್ತು ರೀಕಾನೈಸನ್ಸ್‌ನಲ್ಲಿ ಅವನು ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಪ್ರಯಾಣ ವ್ಯವಸ್ಥೆ, ಆಯುಧ ಸ್ವೀಕರಿಸುವುದು ಮತ್ತು ಅಪರಾಧಿಕ ಕೃತ್ಯಗಳ ದಾಖಲೀಕರಣದಲ್ಲಿ ಅವನು ತೊಡಗಿದ್ದನು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರೂ ಹಣದ ಆಮಿಷಕ್ಕೆ ಬಲಿಯಾಗಿ ನೆಟ್‌ವರ್ಕ್‌ಗೆ ಆಳವಾಗಿ ಸಿಕ್ಕಿಕೊಂಡಿದ್ದರು. ಮಾರ್ಚ್‌ನಲ್ಲಿ ರಾಜ್‌ವೀರ್ ಒಬ್ಬ ಸಹಯೋಗಿಯನ್ನು ಅಹಮದಾಬಾದ್‌ಗೆ ಆಯುಧ ಸಂಗ್ರಹಕ್ಕೆ ಕಳುಹಿಸಿದ್ದನು. ವಿವೇಕ್ ಅಲ್ಲಿಗೆ ತೆರಳಿದ್ದರೂ ಆಯುಧಗಳ ವಿತರಣೆ ನಡೆಯಲಿಲ್ಲ. ಆಗ ಭಟ್ಟಿ ಅವನ ತಂಗುವಿಕೆಗೆ ರೂ. 5000 ನೀಡಿದ್ದನು.ಏಪ್ರಿಲ್ 9ರಂದು ಇಬ್ಬರೂ ಅಮೃತಸರಕ್ಕೆ ತೆರಳಿ ಅಲ್ಲಿ ಪಿಸ್ತೂಲ್, 15-20 ಜೀವಂತ ಗುಂಡುಗಳು ಮತ್ತು ರೂ. 20,000 ಪಡೆದಿದ್ದರು. ಪಂಜಾಬ್‌ನ ಜಿರಕ್‌ಪುರ್‌ನಲ್ಲಿರುವ ಒಂದು ಕ್ಲಬ್‌ನಲ್ಲಿ ಗುಂಡುಬಾರಿಸುವ ಕಾರ್ಯವನ್ನು ಅವರಿಗೆ ನಿಯೋಗಿಸಲಾಗಿತ್ತು. ಆ ಕ್ಲಬ್‌ಗೆ ಭಟ್ಟಿಯಿಂದ ಬಲವಂತದ ಹಣ ವಸೂಲಿಯ ಬೆದರಿಕೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Laxmi News 24×7