ನವದೆಹಲಿ: ಪ್ರಸ್ತುತ ಇರುವ 543 ಲೋಕಸಭಾ ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಎಸೆದಿದ್ದಾರೆ.
ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿದ ಬೆನ್ನಲ್ಲೇ ಎಕ್ಸ್‌ನಲ್ಲಿ ಖರ್ಗೆ ಅವರು ದೀರ್ಘ ಪೋಸ್ಟ್ ಮಾಡಿ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ
ದೇಶವನ್ನು ಉದ್ದೇಶಿಸಿ ಮಾಡುವ ಅಧಿಕೃತ ಭಾಷಣವನ್ನು ಮೋದಿ ಅವರು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ. ಸರ್ಕಾರವು ಮಹಿಳಾ ಮೀಸಲಾತಿ ಮಸೂತೆ ಮತ್ತು ಕ್ಷೇತ್ರ ಮರುವಿಂಗಡಣೆ ಮಸೂದೆಗಳನ್ನು ಒಟ್ಟಿಗೆ ಸೇರಿಸಿ ಜನರಲ್ಲಿ ಗೊಂದಲ ಮೂಡಿಸುತ್ತಿದೆ ಎಂದು ದೂರಿದರು.
ಕ್ಷೇತ್ರ ಮರುವಿಂಗಡಣೆಯ ಹೆಸರಿನಲ್ಲಿ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲು ಮೋದಿ-ಶಾ ಜೋಡಿ ಯತ್ನಿಸುತ್ತಿದೆ. ಆದರೆ ಒಗ್ಗಟ್ಟಿನ ವಿರೋಧ ಪಕ್ಷಗಳ ಹೋರಾಟದಿಂದಾಗಿ ಸಂವಿಧಾನ ತಿದ್ದುಪಡಿ ವಿಧೇಯಕ ಬಿದ್ದುಹೋಗಿದೆ ಎಂದು INDIA ಒಕ್ಕೂಟದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಕಾಂಗ್ರೆಸ್ ಯಾವಾಗಲೂ ಸುಧಾರಣೆಯ ಪರವಾಗಿದೆ. ಹಸಿರು ಕ್ರಾಂತಿಯ ಮೂಲಕ ಕಾಂಗ್ರೆಸ್ ಭಾರತೀಯ ಕೃಷಿಯನ್ನು ಪರಿವರ್ತಿಸಿತು, ಶ್ವೇತ ಕ್ರಾಂತಿಯ ಮೂಲಕ ಡೈರಿ ಅಭಿವೃದ್ಧಿಯನ್ನು ಬಲಪಡಿಸಿತು, ನಮ್ಮ ಬಾಹ್ಯಾಕಾಶ ವಲಯವನ್ನು ಸೃಷ್ಟಿಸಿತು, ಭಾರತವನ್ನು ಪರಮಾಣು ಶಕ್ತಿಯಾಗಿ ಮಾಡಿತು, 1991 ರಲ್ಲಿ ಆರ್ಥಿಕತೆಯನ್ನು ಉದಾರೀಕರಣಗೊಳಿಸಿತು. ಮೋದಿ ಅವರು ಅಧಿಕಾರ ವಹಿಸಿಕೊಳ್ಳುವ ಮೊದಲು 60 ಕೋಟಿ ಆಧಾರ್ ಕಾರ್ಡ್‌ಗಳನ್ನು ವಿತರಿಸಲಾಯಿತು. ಕಾಂಗ್ರೆಸ್ ಆರ್‌ಟಿಇ, ಆಹಾರ ಭದ್ರತಾ ಕಾಯ್ದೆ, ನರೇಗಾವನ್ನು ತಂದಿದೆ. ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಕ್ಕೆ ಮೋದಿ ಅವರು 140 ಕೋಟಿ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
Laxmi News 24×7