ಬೆಂಗಳೂರು: ನಾದಿನಿಯ ಮಕ್ಕಳನ್ನು ನೋಡಿಕೊಳ್ಳುವ ವಿಚಾರದಲ್ಲಿ ದಂಪತಿ ನಡುವೆ ಉಂಟಾದ ಕಲಹವೊಂದು ತಾರಕಕ್ಕೇರಿ, ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲ ತಾಲೂಕಿನ ಮೋಟಗಾನಹಳ್ಳಿಯಲ್ಲಿ ನಡೆದಿದೆ.
ಮೋಟಗಾನಹಳ್ಳಿಯ ನಿವಾಸಿ ವಿನಯ್ ಎಂಬುವವರ ಪತ್ನಿ ಜೀವಿತಾ (26) ಮೃತಪಟ್ಟ ದುರ್ದೈವಿ. ಸುಮಾರು 6 ವರ್ಷಗಳ ಹಿಂದೆ ವಿನಯ್ ಮತ್ತು ಜೀವಿತಾ ಅವರ ವಿವಾಹ ನಡೆದಿತ್ತು. ವಿನಯ್ ಬಟ್ಟೆ ಕೈಮಗ್ಗ ನಡೆಸುತ್ತಾ ಜೀವನ ಸಾಗಿಸುತ್ತಿದ್ದರು. ಈ ದಂಪತಿಗೆ ಎರಡು ವರ್ಷದ ಒಂದು ಮಗುವಿದೆ.
ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ವಿನಯ್ ಸಹೋದರಿ (ನಾದಿನಿ) ತೇಜಸ್ವಿನಿ ಅವರ ಇಬ್ಬರು ಮಕ್ಕಳು ಮೋಟಗಾನಹಳ್ಳಿಯ ಮನೆಗೆ ಬಂದಿದ್ದರು. ಈಗಾಗಲೇ ಎರಡು ವರ್ಷದ ಪುಟ್ಟ ಮಗುವನ್ನು ಸಾಕುತಿದ್ದ ಜೀವಿತಾ ಅವರಿಗೆ, ನಾದಿನಿಯ ಮಕ್ಕಳ ಉಪಚಾರ ಮಾಡುವುದು ಅತೀ ಎನಿಸಿತ್ತು. “ನನ್ನ ಮಗುವಿನ ಜೊತೆಗೆ ಈ ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಗುತ್ತದೆ” ಎಂದು ಜೀವಿತಾ ಪತಿಯ ಬಳಿ ಅಳಲು ತೋಡಿಕೊಂಡಿದ್ದರು. ಇದೇ ವಿಷಯವಾಗಿ ದಂಪತಿ ನಡುವೆ ಜೋರು ಗಲಾಟೆ ನಡೆದಿದೆ ಎನ್ನಲಾಗಿದೆ.
ಮೃತಳ ಪೋಷಕರು ವಿನಯ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ವಿನಯ್‌ಗೆ ಈ ಹಿಂದೆ ಮದುವೆಯಾಗಿದ್ದು, ಮೊದಲ ಪತ್ನಿ ದೂರವಾಗಿದ್ದರು. ಈ ಸತ್ಯವನ್ನು ಮುಚ್ಚಿಟ್ಟು ಆತ ಎರಡನೇ ಮದುವೆಯಾಗಿದ್ದ ಎನ್ನಲಾಗಿದೆ.
ಗಲಾಟೆಯಿಂದ ಮನನೊಂದ ಜೀವಿತಾ ಮನೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಆದರೆ, ಘಟನೆ ನಡೆದ ಸಮಯದಲ್ಲಿ ಪತಿ ಹಾಗೂ ಮನೆಯವರು ಅಕ್ಕಪಕ್ಕದಲ್ಲೇ ಇದ್ದರೂ ಜೀವಿತಾಳನ್ನು ರಕ್ಷಿಸಿಲ್ಲ. ಇದು ಆತ್ಮಹತ್ಯೆಯಲ್ಲ, ಪತಿಯೇ ಮಾಡಿರುವ ಕೊಲೆ ಎಂದು ಮೃತಳ ಸಂಬಂಧಿಕರು ಶಂಕಿಸಿದ್ದಾರೆ.
ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Laxmi News 24×7