ಹಾರೂಗೇರಿ: ಸಚಿವ ಸಂಪುಟ ನಿರ್ಣಯದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೊರಡಿಸಿರುವ ಸರ್ಕಾರದ ಆದೇಶದ ಪ್ರಕಾರ ಶೇ.15ರಷ್ಟು ಒಳ ಮೀಸಲಾತಿ ರೋಸ್ಟರ್ ಮಾರ್ಗಸೂಚಿಗಳಂತೆ 56,342 ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಮಾದಿಗ ಮಹಾಸಭಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ ಐಹೊಳೆ ಹೇಳಿದರು.
ಪಟ್ಟಣದ ಸುರೇಶ ಐಹೊಳೆ ಗೃಹ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ನಿರ್ದೇಶನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾಯ್ದೆ ರೂಪಿಸಿ ರಾಜ್ಯಪಾಲರಿಂದ ಅಂಕಿತ ಪಡೆದಿದೆ. ಆದರೆ, ಒಳ ಮೀಸಲಾತಿ ಸಮರ್ಪಕವಾಗಿ ಹಂಚಿಕೆ ಮಾಡದೆ ನೇಮಕಾತಿ ಕೈಗೊಳ್ಳುತ್ತಿರುವುದು ಅನ್ಯಾಯ ಎಂದರು.
ನಾಗಮೋಹನದಾಸ ವರದಿ ಆಧಾರದ ಮೇಲೆ ಶೇ.15ರಷ್ಟು ಒಳ ಮೀಸಲಾತಿಯನ್ನು ಪರಿಶಿಷ್ಟ ಜಾತಿಯ ಗ್ರೂಪ್ ಎ, ಬಿ, ಸಿ ಉಪವರ್ಗೀಕರಣದಂತೆ ಜಾರಿಗೊಳಿಸುವ ಕುರಿತು ಸ್ಪಷ್ಟ ತಿದ್ದುಪಡಿ ಆದೇಶ ಹೊರಡಿಸಬೇಕು. ಉಪಗುಂಪುಗಳವಾರು ಹಂಚಿಕೆ ಹಾಗೂ ಪರಿಷ್ಕೃತ ರೋಸ್ಟರ್ ಜಾರಿಗೊಳಿಸಿ ಕಾನೂನುಬದ್ಧವಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಸರ್ಕಾರ ಸ್ಪಂದಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮಾದರ ಮಹಾಸಭಾದ ಸದಸ್ಯರಾದ ಮಹೇಶ ಐಹೊಳೆ, ಉಮೇಶ ಶಿಂಗೆ, ವಿನಾಯಕ ಪೋಳ, ಕಾಡೇಶ ಐಹೊಳೆ, ಮಾರುತಿ ಮಾದರ, ಸಂತಾಮ ಹಲಗಿ, ರಾಮಣ್ಣ ಮಾದರ, ಸಂಜು ಮಾಂಗ, ತುಕಾರಾಮ ಮಾದರ, ವಿನೋದ ಗಸ್ತಿ, ಲಕ್ಕಪ್ಪ ಹಲಗಿ, ಅಶೋಕ ಕೆಳಗೇರಿ, ಪ್ರಶಾಂತ ಕೆಳಗಡೆ, ಪ್ರಸನ್ನ ಐಹೊಳೆ ಇತರರಿದ್ದರು.
Laxmi News 24×7