ಬೆಂಗಳೂರು: ಮಾರ್ಚ್ 3ರಂದು ಸಂಭವಿಸಲಿರುವ ವರ್ಷದ ಮೊದಲ ಹಾಗೂ ಹಿಂದು ಪಂಚಾಂಗದ ಪ್ರಕಾರ ವರ್ಷದ ಕೊನೆಯ ಚಂದ್ರಗ್ರಹಣದ ಹಿನ್ನೆಲೆ ರಾಜ್ಯದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಬದಲಾದ ವೇಳಾಪಟ್ಟಿ ಪ್ರಕಟಿಸಲಾಗಿದೆ.
ತುಮಕೂರು ಜಿಲ್ಲೆಯ ದೇವರಾಯನ ದುರ್ಗ ಜಾತ್ರಾ ಮಹೋತ್ಸವದ ದಿನವೇ ಚಂದ್ರಗ್ರಹಣ ಇರುವುದರಿಂದ ದೇವಸ್ಥಾನದ ಮಹಾದ್ವಾರ ಮಧ್ಯಾಹ್ನ 1ರಿಂದ ರಾತ್ರಿ 8:30ರವರೆಗೆ ಬಂದ್ ಆಗಲಿದೆ. ಬೆಳಿಗ್ಗೆ 7:30ರಿಂದ 10:30ರೊಳಗೆ ಪೂಜೆ ನೆರವೇರಿಸಲು ಸೂಚನೆ ನೀಡಲಾಗಿದೆ. ಮಾರ್ಚ್ 3ರ ಬೆಳಗಿನ ಜಾವ 4 ಗಂಟೆಗೆ ಅಭಿಷೇಕ, 5 ಗಂಟೆಗೆ ಅಲಂಕಾರ, 6ರಿಂದ 6:30ರವರೆಗೆ ಯಾತ್ರಾದಾನ, 7 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ. ಬಳಿಕ ಕರಿಗಿರಿಯಲ್ಲಿ ಮಂಟಪಮಡಿ ಹಾಗೂ ರಥೋತ್ಸವ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 8:30ರಿಂದ 10:30ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ದಾವಣಗೆರೆಯ ರಿಂಗ್‌ರಸ್ತೆಯ ಬಳಿಯ ಶಾರದಾ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳಲ್ಲಿ ಗ್ರಹಣದ ಹಿನ್ನೆಲೆ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಸಂಜೆ 6:33ರಿಂದ 6:47ರವರೆಗೆ ಗ್ರಹಣಕಾಲವಾಗಿದ್ದು, ಅಂದು ದೇವಸ್ಥಾನಗಳು ಬಂದ್ ಆಗಲಿವೆ. ಸಿಂಹ, ವೃಷಭ, ಕನ್ಯಾ, ಮಕರ ರಾಶಿಯವರು ಶಾಂತಿ ಮಾಡಿಸಿಕೊಳ್ಳಲು ಸಲಹೆ ನೀಡಲಾಗಿದ್ದು, ಗ್ರಹಣ ಮೋಕ್ಷದ ಬಳಿಕ ಹುರುಳಿ, ಅಕ್ಕಿ, ಎಳ್ಳೆಣ್ಣೆ, ಬೆಳ್ಳಿನಾಗ ದಾನಗಳನ್ನು ಮಾಡಲು ಪುರೋಹಿತರು ಸೂಚಿಸಿದ್ದಾರೆ.
ಇದೇ ವೇಳೆ ಬೆಂಗಳೂರಿನ ಕಾಡು ಮಲ್ಲೇಶ್ವರ ದೇವಸ್ಥಾನ ಮಧ್ಯಾಹ್ನ 12:30ರಿಂದ ಬಂದ್ ಆಗಲಿದೆ. ಸಂಜೆ 7 ಗಂಟೆಯ ಬಳಿಕ ದರ್ಶನಕ್ಕೆ ಅವಕಾಶವಿದ್ದು, ಗ್ರಹಣ ಮೋಕ್ಷದ ನಂತರ ಅಭಿಷೇಕ ಮತ್ತು ಮಹಾಮಂಗಳಾರತಿ ನಡೆಯಲಿದೆ ಎಂದು ಅರ್ಚಕ ಶರತ್ ದೀಕ್ಷಿತ್ ತಿಳಿಸಿದ್ದಾರೆ.
Laxmi News 24×7