ಬೆಂಗಳೂರು: ಉದ್ದಿಮೆ ಜೊತೆಗೆ ರಾಜಕೀಯದಲ್ಲಿ ಇದ್ದುಕೊಂಡು 30 ವರ್ಷದಿಂದ ಸಮಾಜಸೇವೆ ಮಾಡುತ್ತಿದ್ದೇನೆ. ಈ ವೇಳೆ ಹಲವು ಏಳು-ಬೀಳು ಕಂಡಿದ್ದೇನೆ. ಕನಿಷ್ಠ 10 ವರ್ಷ ರಾಜಕೀಯದಲ್ಲಿದ್ದು ನಾಡಿನ ಅಭಿವೃದ್ಧಿಗೆ ಇನ್ನಷ್ಟು ಪೂರಕವಾಗಿ ಕೆಲಸ ಮಾಡುವುದಾಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಂಗಳೂರು ಪ್ರೆಸ್ಕ್ಲಬ್ನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪ್ರೆಸ್‌ಕ್ಲಬ್ ವರ್ಷದ ವ್ಯಕ್ತಿ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ಜೊತೆ 25 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಈ ವೇಳೆ ಶೋಷಿತರಿಗೆ ಸಾಮಾಜಿಕ ನ್ಯಾಯ ಕೊಡುವ ಕೆಲಸ ಮಾಡಿದ್ದೇನೆ.ಲೋಕೋಪಯೋಗಿ ಇಲಾಖೆ ನಿಭಾಯಿಸುವುದು ಕಷ್ಟ. ಆದರೆ, ಇಲಾಖೆಯ ಸಚಿವನಾಗಿ ಒಳ್ಳೆಯ ಕಾರ್ಯ ಮಾಡಿರುವ ತೃಪ್ತಿ ನನಗೆ ಇದೆ. ಜೀವನದಲ್ಲಿ ಹಣ ಮತ್ತು ಅಧಿಕಾರ ಮುಖ್ಯವಲ್ಲ. ನಾವು ಮಾಡಿರುವ ಕಾರ್ಯಗಳು ಶಾಶ್ವತವಾಗಿ ಉಳಿಯಲಿವೆ. ಹೆಚ್ಚು ಸಮಯವನ್ನು ರಾಜಕೀಯಗಿಂತ ಸಾಮಾಜಿಕ ನ್ಯಾಯಕ್ಕೆ ಮೀಸಲಿಟ್ಟಿದ್ದೇನೆ. ಈ ಮೂಲಕ ಜನರು ನನ್ನನ್ನು ಗುರುತಿಸಿದ್ದಾರೆ. ಜನರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರ ಗೌರವವನ್ನು ಉಳಿಸುವ ಕೆಲಸ ಮಾಡುತ್ತೇನೆ ಎಂದರು.
ಬೆಳಗಾವಿ ಪ್ಲೆಸ್‌ಕ್ಲಬ್‌ನಲ್ಲಿ 10 ಕೋಟಿ ರೂ.ವೆಚ್ಚದ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತಿದೆ. ಸದ್ಯದಲ್ಲೇ ಸಿಎಂ ಸಿದ್ದರಾಮಯ್ಯ ಅವರು ಈ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರು ಪ್ರೆಸ್‌ಕ್ಲಬ್‌ಗೆ ಮೂಲಸೌಕರ್ಯ ಕಲ್ಪಿಸಲು ನಾನು ಬದ್ಧವಾಗಿದ್ದೇನೆ.ಪ್ರಶಸ್ತಿಗೆ ತನ್ನದೆಯಾದ ಗೌರವ ಇದೆ. ಈ ಪ್ರಶಸ್ತಿಯು ನನಗೆ ಹೆಚ್ಚು ಖುಷಿ ಕೊಟ್ಟಿದೆ. ಸಮಾಜದ ನ್ಯೂನತೆ ಕುರಿತು ಬೆಳಕು ಚೆಲ್ಲಿ ಅದಕ್ಕೆ ಪರಿಹಾರ ಮಾಡುವುದಕ್ಕೆ ಈ ಪ್ರಶಸ್ತಿಯು ನನಗೆ ಶಕ್ತಿ ಕೊಡಲಿದೆ ಎಂದು ಭಾವಿಸಿದ್ದೇನೆ ಎಂದು ಸಚಿವರು ಹೇಳಿದರು.
ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್, ಶಾಸಕ ರಿಜ್ವಾನ್ ಅರ್ಷದ್, ಪ್ಲೆಸ್‌ಕ್ಲಬ್ ಅಧ್ಯಕ್ಷ ಶ್ರೀಧರ್ ಸೇರಿ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಲೆನಾಡು-ಕರಾವಳಿ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ‘ಕಾಲುಸಂಕ’ ಮೂಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ಪರಿಸ್ಥಿತಿ ಇತ್ತು. ಈ ಸಮಸ್ಯೆ ಪರಿಹಾರಕ್ಕಾಗಿ ಸಂಕದ ಬದಲು ಸೇತುವೆ ನಿರ್ಮಿಸಲು ಈಗಾಗಲೇ 400 ಕೋಟಿ ರೂ.ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 400 ಕೋಟಿ ರೂ.ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದರು.
ಸಿಎಂ ಸಿದ್ದರಾಮಯ್ಯ ಅವರಂತೆ ಸಾಮಾಜಿಕ ನ್ಯಾಯದ ಬಗ್ಗೆ ಸ್ಪಷ್ಟತೆ, ಖಚಿತತೆ ಸತೀಶ್ ಜಾರಕಿಹೊಳಿಗೆ ಇದೆ. ಈ ಕಾರಣದಿಂದ ಸಾಮಾಜಿಕ ನ್ಯಾಯದ ಕನ್ನಡಿಯಲ್ಲಿ ಅವರು ಸ್ಪಷ್ಟವಾಗಿ ಕಾಣುತ್ತಾರೆ. ಜಾರಕಿಹೊಳಿಯವರ ಮೌನದ ಆಳದಲ್ಲಿ ರಭಸ ಇದೆ. ಆ ರಭಸ ಅವರ ಕೆಲಸದಲ್ಲಿ ಕಾಣುತ್ತದೆ. ಜಾರಕಿಹೊಳಿ ಬದಲು ಬೇರೆ ಯಾರಾದರೂ ಲೋಕೋಪಯೋಗಿ ಇಲಾಖೆ ಸಚಿವರಾಗಿದಿದ್ದರೆ ಇಷ್ಟೊತ್ತಿಗೆ ಹೈರಾಣಾಗಿ ಬಿಡುತ್ತಿದ್ದರು. ಹಿಂದಿನ ಸರ್ಕಾರ ಮಾಡಿಟ್ಟು ಹೋಗಿರುವ ಅನಾಹುತ, ಆರ್ಥಿಕ ಹೊರೆ ಬಳಿಕ ಸಮತೋಲನದಿಂದ ಅವರು ಖಾತೆ ನಿರ್ವಹಿಸುತ್ತಿದ್ದಾರೆ.
Laxmi News 24×7