ನವದೆಹಲಿ: ಗದಗ ಯಲವಿಗಿ ರೈಲು ಯೋಜನೆ ಡಿಪಿಆರ್ಗೆ ಒಪ್ಪಿಗೆ ನೀಡಿ ತ್ವರಿತಗತಿಯಲ್ಲಿ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿರುವ ಅವರು, ಕೇಂದ್ರ ಸರ್ಕಾರ ಯೋಜನೆಗೆ ಒಪ್ಪಿಗೆ ನೀಡಿದ್ದು, ಡಿಪಿಆರ್ಗೆ ಅನುಮತಿ ನೀಡಿ ಯೋಜನೆ ಕಾರ್ಯಾರಂಭ ಮಾಡಬೇಕು. ನಾನು ರಾಜ್ಯ ಸರ್ಕಾರಕ್ಕೆ ಭೂಸ್ವಾಧೀನ ಕೈಗೊಳ್ಳಲು ಆಗ್ರಹಿಸಿದ್ದೇನೆ. ಡಿಪಿಆರ್ಗೆ ಒಪ್ಪಿಗೆ ನೀಡುವುದರಿಂದ ತ್ವರಿತಗತಿಯಲ್ಲಿ 2026 ರಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ, ಶಿವಮೊಗ್ಗ ರಾಣೆಬೆನ್ನೂರು ರೈಲು ಮಾರ್ಗ ಆದಷ್ಟು ಬೇಗ ಭೂಸ್ವಾದೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಬಹಳ ವರ್ಷಗಳಿಂದ ಈ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಇದರ ಜೊತೆಗೆ ಗದಗ ಕುಷ್ಟಗಿ ಹೊಸ ರೈಲು ಮಾರ್ಗಕ್ಕಾಗಿ ಬೇಡಿಕೆ ಇದೆ. ನರೇಗಲ್, ಗಜೇಂದ್ರಗಢ ಮೂಲಕ ಹಾದುಹೋಗುವ ಈ ಮಾರ್ಗಕ್ಕೆ ತಕ್ಷಣ ಸಮೀಕ್ಷೆ ನಡೆಸಲು ಸೂಚಿಸಿ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
Laxmi News 24×7